ನೀರು, ವಿದ್ಯುತ್ ಮಿತಬಳಕೆಗೆ ಸೂಚನೆ

ವಿಧಾನಸೌಧ
ವಿಧಾನಸೌಧ
Published on
ಬೆಂಗಳೂರು: ವಿಧಾನಸೌಧ, ವಿಕಾಸಸೌಧ ಸೇರಿದಂತೆ ಸಚಿವಾಲಯದ ಎಲ್ಲಾ ಕಚೇರಿಗಳಲ್ಲಿ ನೀರು ಮತ್ತು ವಿದ್ಯುತ್ ಅನ್ನು ಕಟ್ಟುನಿಟ್ಟಾಗಿ ಮಿತಬಳಕೆ ಹಾಗೂ ಅನಗತ್ಯ ಪೋಲಾಗುವುದನ್ನು ತಡೆಗಟ್ಟಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಚೇರಿ ಸಮಯ ಮುಗಿದ ನಂತರ ವಿದ್ಯುತ್ ದೀಪ, ಫ್ಯಾನ್, ಕಂಪ್ಯೂಟರ್ ಮತ್ತು ಹವಾನಿಯಂತ್ರಣ ಸಾಧನಗಳನ್ನು ಆಫ್ ಮಾಡದೆ ಇರುವುದು ಗಮನಕ್ಕೆ ಬಂದಿದ್ದು, ಈ ಕೂಡಲೇ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಸಚಿವಾಲಯದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನೈಸರ್ಗಿಕ ಬೆಳಕನ್ನು ಬಳಸಬೇಕು. ಕಚೇರಿಗಳ ಕಿಟಕಿಗಳನ್ನು ಪೂರ್ತಿ ತೆರೆದಿಟ್ಟು, ಅಗತ್ಯ ಇದ್ದಾಗ ಮಾತ್ರ ದೀಪ ಮತ್ತು ಫ್ಯಾನ್‌ಗಳನ್ನು ಆನ್ ಮಾಡಬೇಕು. ಪ್ರತಿ ಮಹಡಿಯ ಕಾವಲುಗಾರರು ಮತ್ತು ಭದ್ರತಾ ಸಿಬ್ಬಂದಿ ಸಂಜೆ 6 ಗಂಟೆ ನಂತರ ಅನಗತ್ಯ ವಿದ್ಯುತ್ ದೀಪಗಳನ್ನು ನಂದಿಸಲಾಗಿದೆಯೇ ಮತ್ತು ಬೆಳಗ್ಗೆ 6 ಗಂಟೆಗೆ ಆಫ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು.
ಸಚಿವರು ಮತ್ತು ಅಧಿಕಾರಿಗಳು ಕೊಠಡಿಯಲ್ಲಿ ಇಲ್ಲದ ಸಮಯದಲ್ಲಿ,ಕಚೇರಿ ವೇಳೆ ಮುಕ್ತಾಯವಾದ ನಂತರ ವಿದ್ಯುತ್ ಸಂಪರ್ಕದ ಎಲ್ಲ ಸ್ವಿಚ್‌ಗಳನ್ನು ಕಡ್ಡಾಯವಾಗಿ ಆಫ್ ಮಾಡಬೇಕು. ಕಚೇರಿಗೆ ಬೀಗ ಹಾಕುವ ಮುನ್ನ ಇದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಆಪ್ತ ಕಾರ್ಯದರ್ಶಿಗಳು ಮತ್ತು ಭದ್ರತಾ ಸಿಬ್ಬಂದಿಗೆ ಸೇರಿದೆ ಎಂದು ಸಿಎಸ್ ಸೂಚನೆ ನೀಡಿದ್ದಾರೆ.
ಸಾಂಪ್ರದಾಯಿಕ ದೀಪಗಳ ಬದಲಿಗೆ ದೀರ್ಘಕಾಲ ಬಾಳಿಕೆ ಬರುವ ಎಲ್‌ಇಡಿ ದೀಪಗಳನ್ನು ಅಳವಡಿಸುವುದು ಹಾಗೂ ಕಾರಿಡಾರ್, ವಿಶ್ರಾಂತಿ ಕೊಠಡಿಗಳು ಮತ್ತು ಸಭಾಂಗಣಗಳಲ್ಲಿ ಚಲನಶೀಲ ಸಂವೇದಕಗಳನ್ನು ಅಳವಡಿಸಲು ಸೂಚಿಸಲಾಗಿದೆ.
ಶೌಚಗೃಹ, ಕಚೇರಿಗಳಲ್ಲಿ ನಲ್ಲಿಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕು. ನೀರಿನ ಹರಿವು ಕಡಿಮೆ ಮಾಡಲು ವಾಟರ್ ಏರೇಟರ್‌ಗಳನ್ನು ಅಳವಡಿಸಲಾಗುವುದು. ನಲ್ಲಿಗಳಲ್ಲಿ ಸೋರಿಕೆಯಿದ್ದರೆ ತಕ್ಷಣ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಬೇಕೆಂದು ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಈ ಸೂಚನೆಗಳನ್ನು ವಿಧಾನ ಸಭೆ, ವಿಧಾನ ಪರಿಷತ್ತಿನ ಸಚಿವಾಲಯದ ಎಲ್ಲಾ ಇಲಾಖೆಗಳು ಹಾಗೂ ಇತರ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮುಖ್ಯ ಕಾರ್ಯದರ್ಶಿ ಆದೇಶಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net