ಬಸವಕಲ್ಯಾಣ ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆ ತಾಲೂಕು ಸಮಿತಿ ಅಧ್ಯಕ್ಷ ನೀಲಕಂಠ ರಾಠೋಡ ಅಧ್ಯಕ್ಷತೆಯಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಕಾರ್ಯನಿರ್ವಹಣಾಧಿಕಾರಿ ರಮೇಶ ಸುಲ್ಪಿ ಇದ್ದರು.
ಬಸವಕಲ್ಯಾಣ: ಪ್ರಯಾಣಿಕರ ಸುರೆ ದೃಷ್ಟಿಯಿಂದ ತಾಲೂಕಿನ ಎಲ್ಲ ಬಸ್ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವುದರ ಜತೆ ಕುಡಿಯುವ ನೀರು ಮತ್ತು ಶೌಚಗೃಹ ವ್ಯವಸ್ಥೆ ಮಾಡುವಂತೆ ಗ್ಯಾರಂಟಿ ಯೋಜನೆ ತಾಲೂಕು ಸಮಿತಿ ಅಧ್ಯಕ್ಷ ನೀಲಕಂಠ ರಾಠೋಡ ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಗ್ಯಾರಂಟಿ ಯೋಜನೆ ಅನುಷ್ಠಾನ ಕುರಿತು ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಗ್ರಾಮೀಣ ಮಹಿಳೆಯರು ಕೆಲಸದ ನಿಮಿತ್ತ ಹಾಗೂ ಶಾಲಾ&ಕಾಲೇಜು ವಿದ್ಯಾರ್ಥಿನಿಯರು ಅಧ್ಯಯನಕ್ಕಾಗಿ ನಗರಕ್ಕೆ ಆಗಮಿಸುವುದು ಸಾಮಾನ್ಯ. ಹೀಗಾಗಿ ಬಸ್ಗಳನ್ನು ಸಮಯಕ್ಕೆ ಸರಿಯಾಗಿ ಓಡಿಸಿ ಅನುಕೂಲ ಮಾಡಿಕೊಡಬೇಕು ಎಂದರು.
ಆಹಾರಧಾನ್ಯ ಫಲಾನುಭವಿಗಳ ದಾಖಲಾತಿಯಲ್ಲಿರುವ ಜಿಎಸ್ಟಿ ನೋಂದಣಿಯನ್ನು ರದ್ದುಪಡಿಸಿದರೆ ಸಾಲದು, ಆನ್ಲೈನ್ನಲ್ಲಿರುವ ನೋಂದಣಿ ರದ್ದುಪಡಿಸಿದಾಗಲೇ ಫಲಾನುಭವಿಗಳಿಗೆ ಅನುಕೂಲವಾಗುತ್ತದೆ. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ನಿಲ್ದಾಣದಲ್ಲಿ ಹಿಂದೆಯೇ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಶೌಚಗೃಹ ವ್ಯವಸ್ಥೆಯೂ ಇದೆ. ಉಳಿದ ನಿಲ್ದಾಣಗಳಲ್ಲೂ ಸಿಸಿ ಕ್ಯಾಮರಾ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸವಕಲ್ಯಾಣ ಟಕ ವ್ಯವಸ್ಥಾಪಕ ಸಣ್ಣಕುಂಟೆಪ್ಪ ಹಾಲೂರು ಮಾಹಿತಿ ನೀಡಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ರಮೇಶ ಸುಲ್ಪಿ ಮಾತನಾಡಿ, ಗ್ಯಾರಂಟಿ ಯೋಜನೆ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಕಡ್ಡಾಯವಾಗಿ ಅನುಪಾಲನ ವರದಿ ಸಲ್ಲಿಸಬೇಕು. ಒಬ್ಬೊಬ್ಬರು ಸಲ್ಲಿಸುತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ನಿರ್ಲಕ್ಷ ವಹಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಪಂಚಾಯಿತಿ ಶಿಫಾರಸು ಮಾಡುವುದಾಗಿ ಎಚ್ಚರಿಸಿದರು.