ಆ.3,4,5ರಂದು ಇಂಡಿಯಾ ನ್ಯಾನೋ ಸಮಾವೇಶ

ಸಮಾವೇಶಕ್ಕೆ ಪೂರ್ವಭಾವಿಯಾಗಿ ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಹಿತಿ- ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಮಾಹಿತಿ ನೀಡಿದರು.
ಸಮಾವೇಶಕ್ಕೆ ಪೂರ್ವಭಾವಿಯಾಗಿ ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಹಿತಿ- ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಮಾಹಿತಿ ನೀಡಿದರು.
Published on
ಬೆಂಗಳೂರು: ನ್ಯಾನೋ ತಂತ್ರಜ್ಞಾನದ ಸಂಶೋಧನೆಗಳಿಗೆ ವೇಗ ನೀಡಲು ರಾಜ್ಯಸರ್ಕಾರ ಆಗಸ್ಟ್ 3ರಿಂದ 5ರವರೆಗೆ ನಗರದ ಲಲಿತ್ ಅಶೋಕ ಹೋಟೆಲ್‌ನಲ್ಲಿ 14 ನೇ ಅಂತಾರಾಷ್ಟ್ರೀಯ ಮಟ್ಟದ ‘ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶ’ ಆಯೋಜಿಸಿದೆ. 10 ದೇಶಗಳ 1,000ಕ್ಕೂ ಹೆಚ್ಚು ಪ್ರತಿನಿಧಿಗಳು, 200ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದು, ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗಿನ ಪರಿಕಲ್ಪನೆ, ಸಮನ್ವಯ, ವಾಣಿಜ್ಯೀಕರಣದ ಮೇಲೆ ಸಮಾವೇಶ ಬೆಳಕು ಚೆಲ್ಲಲಿದೆ.
ಸಮಾವೇಶಕ್ಕೆ ಪೂರ್ವಭಾವಿಯಾಗಿ ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಹಿತಿ- ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಮಾಹಿತಿ ನೀಡಿದರು. ದೂರದೃಷ್ಟಿಯ ನೀತಿ ಹಾಗೂ ಕೈಗಾರಿಕಾ ವಲಯದ ಉತ್ತಮ ಸಹಭಾಗಿತ್ವದ ನೆರವಿನಿಂದ ವಿಜ್ಞಾನ ಕ್ಷೇತ್ರದಲ್ಲಿ ಶ್ರೇಷ್ಠತೆ ಸಂಯೋಜಿಸಿದರೆ ಗಮನಾರ್ಹ ಬದಲಾವಣೆ ಸಾಧ್ಯ ಎಂಬುದನ್ನು ಕರ್ನಾಟಕ ನಿರಂತರವಾಗಿ ಸಾಬೀತುಪಡಿಸುತ್ತ ಬಂದಿದೆ. ಇದೇ ಚಿಂತನೆಯ ಪ್ರತೀಕವಾಗಿ ಸಮಾವೇಶದಲ್ಲಿ ಸಂಶೋಧಕರು, ನವೋದ್ಯಮಿಗಳು, ನವೋದ್ಯಮ ಸಂಸ್ಥೆಗಳು, ಶೈಕ್ಷಣಿಕ ವಲಯ ಮತ್ತು ಕೈಗಾರಿಕೆಗಳನ್ನು ಒಂದೇ ವೇದಿಕೆಗೆ ಕರೆತಂದು ಸಂಶೋಧನೆಗಳ ವಾಣಿಜ್ಯೀಕರಣಕ್ಕೆ ವೇಗ ನೀಡಲಾಗುವುದು ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆ ಮತ್ತು ನ್ಯಾನೋ ತಂತ್ರಜ್ಞಾನದಂತಹ ಅತ್ಯಾಧುನಿಕ ತಂತ್ರಜ್ಞಾನ ಒಂದಕ್ಕೊಂದು ಬೆಸೆಯುತ್ತಿರುವ ಸಂದರ್ಭದಲ್ಲಿ, ಅತ್ಯಾಧುನಿಕ ಸಂಶೋಧನೆಗನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಉತ್ಪನ್ನಗಳು, ಸುಸ್ಥಿರ ಕೈಗಾರಿಕೆ ಹಾಗೂ ಜನರ ಜೀವನಮಟ್ಟ ಸುಧಾರಣೆಗೆ ಪರಿಹಾರವಾಗಿ ರೂಪಿಸುವ ವ್ಯವಸ್ಥೆ ನಿರ್ಮಿಸಲು ರಾಜ್ಯ ಬದ್ಧವಾಗಿದೆ ಎಂದರು.
ಮಾಹಿತಿ- ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ ಮಾತನಾಡಿ, ನ್ಯಾನೋ ವಿಜ್ಞಾನವನ್ನು ಉತ್ತೇಜಿಸಿ, ವಾಸ್ತವ ಜಗತ್ತಿಗೆ ಉಪಯೋಗ ಆಗುವ ತಂತ್ರಜ್ಞಾನ ರೂಪಿಸಲು ಈ ಸಮಾವೇಶ ಮಹತ್ವದ ವೇದಿಕೆ ಕಲ್ಪಿಸಲಿದೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳ ಮಧ್ಯೆ ಸಹಭಾಗಿತ್ವ ಉತ್ತೇಜಿಸುವುದು, ನವೋದ್ಯಮ ಸಂಸ್ಥೆಗಳಿಗೆ ಬೆಂಬಲ, ಯುವ ಸಂಶೋಧಕರಿಗೆ ಪ್ರೋತಾಹ ಹಾಗೂ ಶೈಕ್ಷಣಿಕ ವಲಯ, ಕೈಗಾರಿಕೆ ಮತ್ತು ಸರ್ಕಾರದ ನಡುವೆ ಬಲವಾದ ಸಹಕಾರ ನಿರ್ಮಿಸುವ ನಮ್ಮ ಉದ್ದೇಶವನ್ನು ಸಮಾವೇಶ ಪ್ರತಿಬಿಂಬಿಸಲಿದೆ.
ಬಹು ವಿಷಯಾಧಾರಿತ ಸಮ್ಮೇಳನಗಳು, ವಿಶೇಷ ಉಪನ್ಯಾಸಗಳು, ಸಮ್ಮೇಳನ ಪೂರ್ವ ತರಬೇತಿ ಕಾರ್ಯಾಗಾರಗಳು, ಕೈಗಾರಿಕಾ ವಲಯದ ದುಂಡುಮೇಜಿನ ಚರ್ಚೆಗಳು, ಪ್ರದರ್ಶನ, ನವೋದ್ಯಮ ಪೆವಿಲಿಯನ್, ನ್ಯಾನೋ ತಂತ್ರಜ್ಞಾನ ರಸಪ್ರಶ್ನೆ, ಸಂಶೋಧನಾ ಪ್ರಬಂಧಗಳ ಪ್ರದರ್ಶನ, ಪ್ರತಿಷ್ಠಿತ ಬೆಂಗಳೂರು ಇಂಡಿಯಾ ನ್ಯಾನೋ ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸೇರಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ನ್ಯಾನೋ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಪ್ರೊ. ನವಕಾಂತ ಭಟ್, ಸಮಾವೇಶದ ಕೇಂದ್ರ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪ್ರೊ. ಪಿ. ಎಸ್. ಅನಿಲ್ ಕುಮಾರ್ ಉಪಸ್ಥಿತರಿದ್ದರು.

ಕೃಷಿ, ಆರೋಗ್ಯ, ಇಂಧನ ಕ್ಷೇತ್ರಕ್ಕೆ ಒತ್ತು

ಆಗಸ್ಟ್ 3ರಂದು ಸಮ್ಮೇಳನ ಪೂರ್ವ ವಿಶೇಷ ಕಾರ್ಯಾಗಾರಕ್ಕೆ ಚಾಲನೆ ಸಿಗಲಿದೆ. ನ್ಯಾನೋ ತಯಾರಿಕೆ, ವಿಶ್ಲೇಷಣೆ, ಜೈವಿಕ ವಿಜ್ಞಾನದಲ್ಲಿ ನ್ಯಾನೋ ತಂತ್ರಜ್ಞಾನದ ಬಳಕೆ ಕುರಿತು ತಜ್ಞರ ಮಾರ್ಗದರ್ಶನದಲ್ಲಿ ಕಾರ್ಯಾಗಾರ ನಡೆಯಲಿವೆ. ಆ.4 ಮತ್ತು 5ಕ್ಕೆ ಮುಖ್ಯ ಸಮ್ಮೇಳನ ನಡೆಯಲಿದ್ದು, ಸೆಮಿಕಂಡಕ್ಟರ್, ಕೃಷಿ, ಆರೋಗ್ಯ, ಇಂಧನ, ಪರಿಸರ ಕ್ಷೇತ್ರಗಳಲ್ಲಿ ನ್ಯಾನೋ ತಂತ್ರಜ್ಞಾನ ಎಂಬ ವಿಷಯಗಳ ಮೇಲೆ ಗಮನ ಹರಿಸಲಾಗುತ್ತದೆ.

ಶ್ರೇಷ್ಠತಾ ಪ್ರಶಸ್ತಿ

ನ್ಯಾನೋ ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಾಧುನಿಕ ಸಂಶೋಧನೆ, ನಾವೀನ್ಯತೆ ಹಾಗೂ ಯಶಸ್ವಿ ಪ್ರಾಯೋಗಿಕ ಅನ್ವಯಗಳ ಮೂಲಕ ಗಮನಾರ್ಹ ಸಾಧನೆ ಮಾಡಿದ ವ್ಯಕ್ತಿಗಳು, ಸಂಶೋಧನಾ ತಂಡಗಳು, ನವೋದ್ಯಮ ಸಂಸ್ಥೆಗಳು ಹಾಗೂ ಸಂಘಟನೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಿಯಾಂಕ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net