ಭಾರತ ಆಟಿಕೆ ಬಿಸಾಡುವ ಕಸದ ಬುಟ್ಟಿಯಲ್ಲ

 ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ
Published on
ಬೆಂಗಳೂರು: ವಿಶ್ವದ ಯಾವುದೇ ರಾಷ್ಟ್ರಕ್ಕೂ ಸುರಕ್ಷತೆ, ಗುಣಮಟ್ಟದ ಮಾನದಂಡಗಳಿಲ್ಲದೆ ಭಾರತದಲ್ಲಿ ತಮ್ಮ ಆಟಿಕೆ ಉತ್ಪನ್ನಗಳನ್ನು ಬಿಸಾಡುವ ಕಸದ ಬುಟ್ಟಿಯಾಗಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಭಾರತ ಸೇರಿ ಬ್ರಿಕ್ಸ್‌ನ 11 ಸದಸ್ಯ ರಾಷ್ಟ್ರಗಳ ರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಗಳ (ಎನ್‌ಎಸ್‌ಬಿ) ಮುಖ್ಯಸ್ಥರ 5ನೇ ಶೃಂಗಸಭೆಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಚಾಲನೆ ನೀಡಿದರು.
ಆನಂತರ ಮಾತನಾಡಿದ ಅವರು, ಪ್ರಮಾಣೀಕರಣ ಕ್ಷೇತ್ರದಲ್ಲಿ ಬ್ರಿಕ್ಸ್ ಸಹಕಾರ ಕುರಿತು ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಒಪ್ಪಂದಗಳಿಗೆ ಸಹಿ ಮಾಡಲಾಯಿತು. ಬ್ರಿಕ್ಸೃ್, ವಿಶ್ವದ ಜನಸಂಖ್ಯೆಯ ಶೇ.49.5, ಜಾಗತಿಕ ಜಿಡಿಪಿಯ ಶೇ.40 ಮತ್ತು ಜಾಗತಿಕ ವ್ಯಾಪಾರದ ಶೇ.26 ಪಾಲನ್ನು ಪ್ರತಿನಿಧಿಸುತ್ತಿದ್ದು, ಬ್ರಿಕ್ಸೃ್ ಸಹಕಾರವು ಕೇವಲ ಆರ್ಥಿಕತೆಗೆ ಮಾತ್ರ ಸೀಮಿತವಾಗಿಲ್ಲ. ಭಯೋತ್ಪಾದನೆ ನಿಗ್ರಹ, ಹವಾಮಾನ ಬದಲಾವಣೆ, ಆಹಾರ ಮತ್ತು ಇಂಧನ ಭದ್ರತೆ, ಹಣಕಾಸು, ವ್ಯಾಪಾರ, ವಿಶ್ವ ವ್ಯಾಪಾರ ಸಂಸ್ಥೆ ಸುಧಾರಣೆಗಳು, ಕೃಷಿ-ಕಾರ್ಮಿಕ ವಲಯ, ಡಿಜಿಟಲ್, ತಂತ್ರಜ್ಞಾನ ಕ್ಷೇತ್ರಗಳನ್ನೂ ಒಳಗೊಂಡಿದೆ ಎಂದರು.
ಬ್ರಿಕ್ಸೃ್ ರಾಷ್ಟ್ರಗಳ ರಾಷ್ಟ್ರೀಯ ಮಾನದಂಡ ಸಂಸ್ಥೆಗಳ ನಡುವೆ ಸಹಕಾರಕ್ಕಾಗಿ ಔಪಚಾರಿಕ ಚೌಕಟ್ಟು ರೂಪಿಸುವ ನಿಟ್ಟಿನಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ. ಸದಸ್ಯ ರಾಷ್ಟ್ರಗಳ ಮಟ್ಟದಲ್ಲಿ ಅಗತ್ಯ ಮಾಹಿತಿ ಹಂಚಿಕೆ, ತಾಂತ್ರಿಕ ಸಹಯೋಗ ಮತ್ತು ಸಾಮರ್ಥ್ಯ ವೃದ್ಧಿಯ ಧ್ಯೋತಕವಾಗಿದೆ. ಎಲ್ಲ ಉತ್ಪನ್ನಗಳ ಆಮದು ಹಾಗೂ ರಫ್ತಿಗೆ ಮಾನದಂಡಗಳನ್ನು ರೂಪಿಸುವ ಕೆಲಸವಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಐಎಸ್ ಡೆಪ್ಯುಟಿ ಜನರಲ್ ಸಂಜಯ್ ಗರ್ಗ್, ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಶಂಭು ಎಲ್. ಹಕ್ಕಿ ಉಪಸ್ಥಿತರಿದ್ದರು.

ಪ್ರಯೋಗಾಲಯ ಹೆಚ್ಚಿಸಬೇಕಿದೆ

ಮಾವು ಸೇರಿ ಕೆಲವು ಆಹಾರೋತ್ಪನ್ನಗಳ ರಫ್ತು ಹಡಗುಗಳು ವಾಪಸಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಗ್ರಾಹಕ ವ್ಯವಹಾರಗಳ ಖಾತೆ ಕಾರ್ಯದರ್ಶಿ ನಿಧಿ ಖರೆ, ಭಾರತದಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ರಫ್ತುಮಾಡಬೇಕಾದವರು ರಫ್ತುದಾರರು. ಉತ್ಪನ್ನವನ್ನು ಮಾನದಂಡಕ್ಕೆ ಅನುಗುಣವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರಯೋಗಾಲಯಗಳ ಅಗತ್ಯ ಇರುತ್ತದೆ. ದೊಡ್ಡ ಕಂಪನಿಗಳಿಗೆ ಮಾತ್ರವಲ್ಲದೆ, ಎಂಎಸ್‌ಎಂಇಗಳಿಗೂ ಪ್ರಯೋಗಾಲಯ ಸೌಲಭ್ಯ ಸಿಗುವಂತೆ ಮಾಡುವುದರ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

ಸಮಿತಿ ರಚನೆ :

ಭಾರತೀಯ ಮಾನಕ ಬ್ಯೂರೊ (ಬಿಐಎಸ್) ಡಿಡಿಜಿ ರೀನಾ ಗರ್ಗ್ ಮಾತನಾಡಿ, ಆಯುರ್ವೇದವು ಭಾರತದೇ ಉತ್ಪನ್ನವಾದ್ದರಿಂದ ಅದಕ್ಕೆ ಅಂತಾರಾಷ್ಟ್ರೀಯ ಮಾನದಂಡ ನಿಗದಿಪಡಿಸಿಲ್ಲ. ಹಾಗಾಗಿ ಭಾರತದ ನೇತೃತ್ವದಲ್ಲೇ ಸಮಿತಿ ರಚಿಸಲಾಗಿದೆ. ಸೂತ್ರನೇತಿ, ಯೋಗ ಮ್ಯಾಟ್ ಸೇರಿ ಅನೇಕ ವಿಚಾರಗಳಿಗೆ ಮಾನದಂಡ ರೂಪಿಸಿ ಅದನ್ನೇ ಅಂತಾರಾಷ್ಟ್ರೀಯ ಸಮುದಾಯಕ್ಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಗರ್ಗ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net