ಮಕ್ಕಳ ಜಾಣತನಕ್ಕೆ ತಕ್ಕಂತೆ ವಿದ್ಯೆ ಕಲಿಸಿ

ಯಾದಗಿರಿ ಕಸಾಪ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶಿಕ್ಷಕರ ಅಭಿನಂದನಾ ಸಮಾರಂಭವನ್ನು ಶ್ರೀ ಕುಮಾರ ಸ್ವಾಮೀಜಿ ಉದ್ಘಾಟಿಸಿದರು. ನಿವೃತ್ತ ಡಿಡಿಪಿಐ ಶಾಂತಗೌಡ ಪಾಟೀಲ್​, ಸಿದ್ದಪ್ಪ ಹೊಟ್ಟಿ, ಡಾ.ಸುಭಾಷಚಂದ್ರ ಕೌಲಗಿ ಇತರರಿದ್ದರು.
ಯಾದಗಿರಿ ಕಸಾಪ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶಿಕ್ಷಕರ ಅಭಿನಂದನಾ ಸಮಾರಂಭವನ್ನು ಶ್ರೀ ಕುಮಾರ ಸ್ವಾಮೀಜಿ ಉದ್ಘಾಟಿಸಿದರು. ನಿವೃತ್ತ ಡಿಡಿಪಿಐ ಶಾಂತಗೌಡ ಪಾಟೀಲ್​, ಸಿದ್ದಪ್ಪ ಹೊಟ್ಟಿ, ಡಾ.ಸುಭಾಷಚಂದ್ರ ಕೌಲಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಡಿಡಿಪಿಐ ಶಾಂತಗೌಡ ಸಲಹೆ
  • > ಕಸಾಪದಿಂದ 12 ಶಿಕ್ಷಕರಿಗೆ ಅಭಿನಂದನೆ
ಯಾದಗಿರಿ: ಇಂದಿನ ಮಕ್ಕಳು ಅತ್ಯಂತ ಜಾಣರಿದ್ದು, ಅವರ ಜಾಣತನಕ್ಕೆ ತಕ್ಕಂತೆಯೇ ವಿದ್ಯೆ ಕಲಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ನಿವೃತ್ತ ಡಿಡಿಪಿಐ ಶಾಂತಗೌಡ ಪಾಟೀಲ್​ ಹೇಳಿದರು.
ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಸಹಯೋಗದಡಿ ಭಾನುವಾರ ಕಸಾಪ ಜಿಲ್ಲಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಅತ್ಯುತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪಡೆದ 12 ಶಿಕ್ಷಕರಿಗೆ ಅಭಿನಂದನಾ ಸಮಾರಂಭದಲ್ಲಿ ಭಾವಿ ಪ್ರಜೆಗಳ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಕ್ಕಳ ಚಲನ-ವಲನ, ಪ್ರತಿಭೆ ಗುರುತಿಸಿ ಶಿಕ್ಷಣ ನೀಡಿದರೆ ಗುರಿ ಮುಟ್ಟಲು ಸರಳವಾಗುತ್ತದೆ. ಈ ನಿಟ್ಟಿನಲ್ಲೇ ಪಠ್ಯಗಳು ಬರಬೇಕು ಎಂದು ಒತ್ತಾಸೆ ವ್ಯಕ್ತಪಡಿಸಿದರು.
ಮಕ್ಕಳು ತಾಂತ್ರಿಕವಾಗಿ ಪ್ರಬಲವಾಗುತ್ತಿದ್ದರೂ ನೈತಿಕತೆ, ರಾಷ್ಟ್ರೀಯತೆ ಮರೆಯಾಗುತ್ತಿದೆ ಎಂದು ವಿಷಾದಿಸಿದ ಅವರು, ಇತ್ತೀಚೆಗೆ ದೆಹಲಿಯಲ್ಲಿ ನಡೆದ ಹೋರಾಟದಲ್ಲಿ ವಿದ್ಯಾರ್ಥಿಗಳ ವರ್ತನೆ ಗಮನಿಸಿದರೆ ಯಾವುದೇ ರಾಷ್ಟ್ರೀಯತೆ, ದೇಶಪ್ರೇಮ ಎಂಬುದು ಕಂಡಿಲ್ಲ. ಬದಲಿಗೆ ತಾಂತ್ರಿಕತೆ ಪಡೆದಿದ್ದನ್ನೇ ದೊಡ್ಡದೆಂಬಂತೆ ಬಿಂಬಿಸಿ ತಾಂತ್ರಿಕ ಕೋಶಗಳಾಗಿ ಕಂಡುಬಂದರು ಎಂದರು.
ಜ್ಞಾನ ಕೋಶಕ್ಕಿಂತ ಭಾವಕೋಶಕ್ಕೆ ಒತ್ತು ಕೊಟ್ಟಾಗಲೇ ದೇಶದ ಏಳಿಗೆ ಆಗಲಿದೆ. ಬೌದ್ಧಿಕ ಶಕ್ತಿಯಿಂದ ಪ್ರತಿಕ್ರಿಯೆ ಕೊಡಲು ಆಗದ ಯುವ ಜನತೆ ಮತ್ತು ವಿದ್ಯಾರ್ಥಿಗಳು ಎತ್ತ ಸಾಗುತ್ತಿದ್ದಾರೆ ಎಂಬ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಷಯಾಧಾರಿತ ಸಂಗತಿಗೆ ಪ್ರತಿಯಾಗಿ ಸಮರ್ಥವಾಗಿ ಪ್ರತಿಕ್ರಿಯಿಸಲು ಆಗದೆ ತಮ್ಮ ವೈಫಲ್ಯವನ್ನು ಅಶ್ಲೀಲವಾಗಿ ಕಮೆಂಟಿಸುವ ಮೂಲಕ ಯುವಕರು ದಾರಿ ತಪ್ಪುತ್ತಿದ್ದಾರೆ. ಬೌದ್ಧಿಕವಾಗಿ ಬೆಳೆಯಬೇಕಾದ ಮಕ್ಕಳು ಭೌತಿಕವಾಗಿ ಮಾತ್ರ ಬೆಳೆಯುತ್ತಿರುವುದು ದುರಂತ ಎಂದು ವಿಷಾದಿಸಿದರು.
ವಿಶ್ವಕರ್ಮ ಏಕದಂಡಿಗಿ ಮಠದ ಶ್ರೀ ಕುಮಾರ ಸ್ವಾಮೀಜಿ ಸಾನ್ನಿಧ್ಯ, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕರಾದ ಚಂದ್ರಪ್ಪ ಗುಂಜನೂರ, ಸಿದ್ದಪ್ಪ ಅವಂಟಿ, ಕಾಂತಪ್ಪ ಬಾಗ್ಲಿ, ಶಿವಗೀತಾ ಹಿರೇಮಠ, ಇಂದಿರಾ ಎಸ್​.ದೊಡ್ಡಮನಿ, ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಕಲಕಂಭ, ಹುಣಸಗಿ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಇತರರಿದ್ದರು. ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಕೌಲಗಿ ಪ್ರಾಸ್ತಾವಿಕ ಮಾತನಾಡಿದರು. ಎಸ್​.ಎಸ್​. ನಾಯಕ ನಿರೂಪಣೆ ಮಾಡಿದರು. 12 ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಲಾಬಿ ಮಾಡಿ ಪ್ರಶಸ್ತಿ ಪಡೆಯದಿರಿ
ಶಿಕ್ಷಕರು ಸಹ ಇಂದು ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ನಡೆದುಕೊಳ್ಳುವುದು ಕಡಿಮೆಯಾಗುತ್ತಿದೆ. ಹಿಂದೆ ನಾನು ಡಿಡಿಪಿಐ ಆಗಿ ಕೆಲಸ ಮಾಡುವಾಗ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಒಂಬತ್ತು ಜನರ ಆಯ್ಕೆ ಮಾಡಬೇಕಾದ ಸಂದರ್ಭದಲ್ಲಿ ಒತ್ತಡಕ್ಕೊಳಗಾಗಿ 12 ಜನರನ್ನು ಆಯ್ಕೆ ಮಾಡಬೇಕಾಯಿತು ಎಂದು ಶಾಂತಗೌಡ ಪಾಟೀಲ್​ ಹೇಳಿದರು. ಲಾಬಿ ಮೂಲಕ ಪ್ರಶಸ್ತಿ ಪಡೆಯುವಷ್ಟರ ಮಟ್ಟಿಗೆ ಶಿಕ್ಷಕರು ಇಳಿದಿರುವುದು ಇಂದಿನ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಶಿಕ್ಷಕರು ಸೇವೆ ಸಲ್ಲಿಸಬೇಕು, ಪ್ರಶಸ್ತಿ ಪುರಸ್ಕಾರಗಳು ತಾವೇ ಅರತಿ ಬರುತ್ತವೆ. ಕರ್ತವ್ಯ ಅತ್ಯುತ್ತಮವಾಗಿ ನಿರ್ವಹಿಸಿದ ಜೋಗುಂಡಬಾವಿ ಶಿಕ್ಷಕನಿಗೆ ಸಿಕ್ಕ ಭವ್ಯ ಗುರುವಂದನೆ ಸ್ಮರಿಸಿದ ಅವರು, ಶಿಕ್ಷಕರು ಆ ರೀತಿ ಸನ್ಮಾನ, ಪ್ರಶಸ್ತಿ ಪುರಸ್ಕಾರ ಪಡೆಯಬೇಕು ಎಂದು ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net