ಬೆಂಗಳೂರು: ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮುಂಗಾರು ಕೊರತೆಯಾಗುವ ಮುನ್ಸೂಚನೆ ಇದ್ದು, ಕುಡಿಯುವ ನೀರಿಗೆ ತೊಂದರೆ ಆಗದಂತೆ ಮುಂಜಾಗ್ರತೆ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಭೆ ಕಟ್ಟಾಜ್ಞೆ ಮಾಡಿದರು.
ವಿಧಾನಸೌಧದಲ್ಲಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಕುಡಿಯುವ ನೀರು ಪೂರೈಕೆ, ಜಾನುವಾರುಗಳ ಮೇವು ಮತ್ತು ಬಿತ್ತನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಸಿಇಒಗಳ ಸಭೆ ನಡೆಸಿದರು.
ಈ ವರ್ಷ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆಗಸ್ಟ್ನಲ್ಲಿ ವಾಡಿಕೆ ಮಳೆಯಾಗುವ ಸಾಧ್ಯತೆಯಿದ್ದು, ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆ ನಿರೀಕ್ಷಿಸಲಾಗಿದೆ. ಪ್ರಮುಖ 14 ಜಲಾಶಯಗಳಲ್ಲಿ ಪ್ರಸ್ತುತ 321.93 ಟಿಎಂಸಿ ನೀರು ಲಭ್ಯವಿದ್ದು, ಒಟ್ಟು ಸಾಮರ್ಥ್ಯದ ಶೇ.36 ಇದೆ. 2025ರ ಈ ಅವಧಿಯಲ್ಲಿ 330.35 ಟಿಎಂಸಿ ನೀರು ಲಭ್ಯವಿತ್ತು. ಈಗ ಕುಡಿಯುವ ನೀರಿಗಾಗಿ ಜಲಾಶಯಗಳಲ್ಲಿ ನೀರಿನ ಲಭ್ಯತೆ ಖಾತ್ರಿಪಡಿಸಿಕೊಳ್ಳಬೇಕಾಗಿದೆ. ಕುಡಿಯುವ ನೀರಿಗೆ ತೊಂದರೆ ಆದರೆ ಜಿಲ್ಲಾಧಿಕಾರಿಗಳೇ ಹೊಣೆಯಾಗುತ್ತಾರೆ. ಕಂದಾಯ, ಪಂಚಾಯತ್‌ರಾಜ್ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು. ಏಪ್ರಿಲ್-ಜೂನ್‌ನಲ್ಲಿ ಉತ್ತರ ಒಳನಾಡಿನ ಬಹುತೇಕ
ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಬಿಸಿಗಾಳಿ ದಿನಗಳು ಕಂಡು ಬರುವ ಸಾಧ್ಯತೆಯಿದ್ದು, ಮುಂಜಾಗ್ರತೆ ಕೈಗೊಳ್ಳಬೇಕು. ಹವಾಮಾನ ಇಲಾಖೆ ಮುನ್ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲಾಧಿಕಾರಿಗಳ ವರದಿ ಆಧಾರದಲ್ಲಿ ಅಗತ್ಯ ಅನುದಾನ ಒದಗಿಸಲು ಹಣಕಾಸು ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಭರವಸೆ ನೀಡಿದರು.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಬಹುದಾದ 213 ತಾಲೂಕುಗಳನ್ನು ಮತ್ತು 2410 ಗ್ರಾಪಂಗಳನ್ನು ಗುರುತಿಸಲಾಗಿದೆ. ಪ್ರಸ್ತುತ 114 ತಾಲೂಕುಗಳ 598 ಗ್ರಾಪಂಗಳಲ್ಲಿ ನೀರಿನ ಸಮಸ್ಯೆಯಿದೆ. ಟ್ಯಾಂಕರ್‌ಗಳ ಮೂಲಕ 137 ಗ್ರಾಮಗಳಿಗೆ ಒಟ್ಟು 129 ಟ್ಯಾಂಕ್ ನೀರು ಸರಬರಾಜು ಮಾಡಲಾಗುತ್ತಿದೆ. 585 ಖಾಸಗಿ ಕೊಳವೆಬಾವಿ ಬಾಡಿಗೆಗೆ ಪಡೆಯಲಾಗಿದೆ. ಈ ಮೂಲಕ 515 ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು ಮಾಹಿತಿ ಪಡೆದರು.
ಪ್ರಸ್ತುತ 27 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 95 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮಸ್ಯೆ ಎದುರಾಗಬಹುದು ಎಂದು ಗುರುತಿಸಲಾಗಿದೆ. ಒಟ್ಟು 145 ವಾರ್ಡ್‌ಗಳಿಗೆ 57 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, 22 ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಕಲಬುರಗಿಯಲ್ಲೇ ಹೆಚ್ಚು
ಕಲಬುರಗಿ ಜಿಲ್ಲೆಯ 147 ಗ್ರಾಪಂ, ಬಾಗಲಕೋಟೆಯ 114, ಬೆಳಗಾವಿಯ 127, ಚಿಕ್ಕಮಗಳೂರಿನ 115, ಹಾವೇರಿಯ 138, ಮಂಡ್ಯ 130, ತುಮಕೂರಿನ 141, ಉತ್ತರ ಕನ್ನಡ ಜಿಲ್ಲೆಯ 125 ಗ್ರಾಪಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು.
ರಸಗೊಬ್ಬರದ ಮೇಲೆ ಕಣ್ಣಿಡಿ
ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ ರಸಗೊಬ್ಬರ ಪೂರೈಕೆಯಲ್ಲಿ ಅಡಚಣೆ ಆಗುವ ಸಾಧ್ಯತೆಯಿದೆ. ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಖರೀದಿಸಿ ದಾಸ್ತಾನು ಇರಿಸುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಸೂಕ್ತ ಸಮಯದಲ್ಲಿ ಯೂರಿಯಾ, ಡಿಎಪಿ ವಿತರಣೆ ಮಾಡಬೇಕು. ಎರಡು ವರ್ಷಗಳಲ್ಲಿ ಉತ್ತಮ ಮಳೆ ಆಗಿರುವುದರಿಂದ ಮೇವಿನ ಕೊರತೆ ಸದ್ಯಕ್ಕಿಲ್ಲ. ಈ ಬಗ್ಗೆ ನಿರ್ಲಕ್ಷ್ಯ ವಹಿಸದೆ ಮೇವಿನ ಲಭ್ಯತೆ ಖಾತ್ರಿಪಡಿಸಬೇಕೆಂದು ಸೂಚಿಸಿದರು.
ಮುಖ್ಯಮಂತ್ರಿ ಸೂಚನೆಗಳು
-ಅಗತ್ಯ ಸಂದರ್ಭದಲ್ಲಿ ಕೊಳವೆಬಾವಿ ಕೊರೆಯಬಹುದು
-ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಟ್ಯಾಂಕರ್ ನೀರು ಪೂರೈಕೆ
-ಖಾಸಗಿ ಕೊಳವೆಬಾವಿ ಬಾಡಿಗೆ ಪಡೆಯುವುದಕ್ಕೆ ಆದ್ಯತೆ
-ಜಲಾಶಯಗಳಲ್ಲಿ ನೀರಾವರಿಗಿಂತ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ
-ಜಲಾಶಯಗಳಲ್ಲಿ ನೀರಿನ ಸೋರಿಕೆ ಗುರುತಿಸಿ ದುರಸ್ತಿಗೆ ಕ್ರಮವಹಿಸಿ
-ಸಾರ್ವಜನಿಕರ ಅಹವಾಲುಗಳಿಗೆ ತುರ್ತಾಗಿ ಸ್ಪಂದಿಸಬೇಕು
-ತಾಲೂಕು, ವಾರ್ಡ್‌ನಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಬೇಕು
-ಜಿಲ್ಲಾಮಟ್ಟದ ಕಾರ್ಯಪಡೆ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು