ಪರಿಸರ ನಾಶದಿಂದ ಮನುಕುಲ ಅವನತಿ

Humanity is being degraded by environmental destruction.
Humanity is being degraded by environmental destruction.
Published on
ಚನ್ನಪಟ್ಟಣ : ಶುದ್ಧ ಗಾಳಿ, ನೀರು ಎಲ್ಲವನ್ನು ನೀಡುವ ಮರಗಳಿಲ್ಲ ಎಂದರೆ ಮನುಕುಲದ ಸರ್ವನಾಶ ನಿಶ್ಚಿತ. ಪ್ರತಿಯೊಬ್ಬರು ಮರಗಳನ್ನು ಬೆಳೆಸಿ ಪರಿಸರ ರಕ್ಷಿಸಬೇಕು ಎಂದು ತಾಲೂಕು ವಲಯ ಅರಣ್ಯಾಧಿಕಾರಿ ಮಲ್ಲೇಶ್ ತಿಳಿಸಿದರು.
ರೇಷ್ಮೆನಾಡು ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಹಾಗೂ ಬೆಳಕೆರೆಯ ಸಂಪೂರ್ಣ ಸಮೂಹ ಶಿಕ್ಷಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಮ್ಮ ನಡಿಗೆ-ಹಸಿರಿನ ಕಡೆಗೆ ಅಭಿಯಾನದಡಿ ನಗರದಲ್ಲಿ ಆಯೋಜಿಸಿದ್ದ ಭವ್ಯನಡಿಗೆ (ಮ್ಯಾರಥಾನ್)ನಲ್ಲಿ ಮಾತನಾಡಿದರು.
ಪೂರ್ವಿಕರು ಮಕ್ಕಳ ಜತೆಗೆ ಪರಿಸರವನ್ನು ಪೋಷಣೆ ಮಾಡುತ್ತಾ ಬಂದಿದ್ದರು. ಈ ನಿಟ್ಟಿನಲ್ಲಿ ಅವರು ನೂರಾರು ವರ್ಷ ಆರೋಗ್ಯವಂತ ಜೀವನ ಮಾಡಿದ್ದಾರೆ. ಆದರೆ, ನಾವು ಆಧುನಿಕತೆಯ ಸೋಗಿನಲ್ಲಿ ಮರಗಳನ್ನು ಕಡಿದು ನಾಶ ಮಾಡುತ್ತಿದ್ದೇವೆ. ಪರಿಸರ ಅಸಮತೋಲನದಿಂದ ನಮ್ಮ ದೇಹದ ಆರೋಗ್ಯ ಸಮತೋಲನ ಕಳೆದುಕೊಂಡು ಆಯಸ್ಸು ಸಹ ಶೇ.50 ಕಡಿಮೆಯಾಗುತ್ತಾ ಬಂದಿದೆ. ಇದೇ ರೀತಿ ಮುಂದುವರಿದರೆ ಮನುಕುಲದ ನಾಶ ನಿಶ್ಚಿತ ಎಂದು ಎಚ್ಚರಿಸಿದರು.
ನಿವೃತ್ತ ಪ್ರಾಂಶುಪಾಲ ನಿಂಗೇಗೌಡ(ಎನ್‌ಜಿ) ಮಾತನಾಡಿ, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವ ನಿಟ್ಟಿನಲ್ಲಿ ರಮೇಶ್‌ಗೌಡರು ಹಸಿರಿದ್ದರೆ ಉಸಿರು ಆಂದೋಲನ ನಡೆಸುತ್ತಿದ್ದಾರೆ. ವಾಹನಗಳ ಹೊಗೆ ಸೇರಿ ನಾನಾ ರೀತಿಯಲ್ಲಿ ಪರಿಸರ ಕಲುಷಿತವಾಗುತ್ತಿದೆ. ಅದನ್ನು ಸಮತೋಲನಕ್ಕೆ ತರಲು ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕಿದೆ ಎಂದು ಕರೆ ನೀಡಿದರು.
ಪಾಲಕರು ಮಕ್ಕಳಿಗೆ ವಿದ್ಯೆಕಲಿಸಿ ಪೋಷಣೆ ಮಾಡಿದರೆ ಮುಂದೆ ನಿಮ್ಮ ರಕ್ಷಣೆ ನೀವೆ ಮಾಡಿಕೊಳ್ಳುತ್ತೀರಿ. ಅದೇ ರೀತಿ ಸಸಿಗಳನ್ನು ನೆಟ್ಟು ಒಂದು ವರ್ಷ ಪೋಷಣೆ ಮಾಡಿದರೆ ಮುಂದೆ ಗಿಡಗಳು ತಾವೇ ಬೆಳೆದು ಮರವಾಗಿ ಮುಂದಿನ ಪೀಳಿಗೆಗೆ ಶುದ್ಧಗಾಳಿ, ನೀರು ನೀಡುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಮನೆಯ ಸುತ್ತಮುತ್ತ ಗಿಡನಟ್ಟು ಪೋಷಣೆ ಮಾಡಿ ಪರಿಸರದ ಸಂರಕ್ಷಣೆಗೆ ಕೈ ಜೋಡಿಸಿ ಎಂದರು.
ಬಮುಲ್ ಮತ್ತು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಲಿಂಗೇಶ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣಕ್ಕೆ ನೀಡುವಷ್ಟೇ ಪ್ರಾಮುಖ್ಯತೆ ಪರಿಸರದ ಸಂರಕ್ಷಣೆಗೆ ನೀಡಬೇಕು. ಈ ನಿಟ್ಟಿನಲ್ಲಿ ಮರ ಕಡಿದರೆ ಸಸಿ ನೆಟ್ಟು ಬೆಳೆಸುವ ಮನೋಭಾವ ಪ್ರತಿಯೊಬ್ಬರಲ್ಲೂ ಮೂಡಲಿ. ಈ ಆಂದೋಲನಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಕಕಜವೇ ಅಧ್ಯಕ್ಷ ರಮೇಶ್‌ಗೌಡ, ಪುರ ಪೊಲೀಸ್ ಠಾಣೆಯ ಪಿಎಸ್‌ಐ ನಾಯಕ್ ಮಾತನಾಡಿದರು. ಮ್ಯಾರಥಾನ್‌ನಲ್ಲಿ ಸಂಪೂರ್ಣ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಕೇಂಬ್ರಿಡ್ಜ್, ಜ್ಞಾನ ಸರೋವರ, ಗ್ಲೋಬಲ್ ಸ್ಕೂಲ್, ಪಾಲಿಟೆಕ್ನಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳು ಭಾಗವಹಿಸಿದ್ದರು.
ನಗರದ ಸ್ಪನ್‌ಸಿಲ್ಕ್‌ಮಿಲ್‌ನಿಂದ ಆರಂಭವಾದ ಮ್ಯಾರಥಾನ್ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾಗಿ ಎಂಜಿ ರಸ್ತೆ ಮೂಲಕ ಶೇರುವಾ ಹೋಟೆಲ್‌ಗೆ ಸರ್ಕಲ್ನಿಂದ ಬಿ.ಎಂ. ರಸ್ತೆಯಲ್ಲಿ ಸಾಗಿ ಕಾವೇರಿ ಸರ್ಕಲ್ ಸೇರಿತು. ಈ ವೇಳೆ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು.
ಮ್ಯಾರಾಥಾನ್‌ನಲ್ಲಿ ಭಾಗವಹಿಸಿದ್ದ ಪರಿಸರ ಪ್ರೇಮಿಗಳಿಗೆ ಪಟ್ಟಣದ ರೋಟರಿ ಟಾಯ್ಸ್ ಸಿಟಿ ಕ್ಲಬ್ ಅಧ್ಯಕ್ಷ ಸಂತೋಷ್‌ಪಾಪಣ್ಣ ಮತ್ತು ಕಾರ್ಯದರ್ಶಿ ಆದರ್ಶಕುಮಾರ್ ಅವರಿಂದ ತಂಪುಪಾನೀಯ ಮತ್ತು ಬಿಸ್ಕೆಟ್ ವಿತರಿಸಲಾಯಿತು.
ಆದಿಚುಂಚನಗಿರಿ ಅಂಧರ ಶಾಖಾಮಠದ ಪೀಠಾಧ್ಯಕ್ಷ ಡಾ. ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಮ್ಯಾರಾಥಾನ್‌ನಲ್ಲಿ ಸಾನ್ನಿಧ್ಯ ವಹಿಸಿದರು. ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್ ಗೌಡ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಸಿ. ವೀರೇಗೌಡ, ಜೆಡಿಎಸ್ ಮುಖಂಡ ಎಂ.ಜಿ.ಕೆ.ಪ್ರಕಾಶ್, ಡಾ. ಟಿ.ವಿ.ಶಂಕರ್, ಸಂಪೂರ್ಣ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಬೈರೇಗೌಡ, ಡೀನ್ ಚಿತ್ರರಾಯ್‌ಸೆಲ್ಪಿ, ಜ್ಞಾನ ಸರೋವರ ಕಾಲೇಜಿನ ಪ್ರಾಂಶುಪಾಲ ಆದರ್ಶಕುಮಾರ್ ಸೇರಿ ಪ್ರರಿಸರ ಪ್ರೇಮಿಗಳು ಇದ್ದರು.
ಗಾಳಿ, ನೀರು, ಕಲುಶಿತ
ಆರೋಗ್ಯವಂತರಾಗಿರಲು ಉತ್ತಮ ಪರಿಸರ ಅಗತ್ಯ ಎಂದು ಪರಿಸರ ಪ್ರೇಮಿ ಇಂಜಿಯರ್ ಶಂಕರಪ್ಪ ಹೇಳಿದರು. ಕಾರ್ಖಾನೆಗಳು, ವಾಹನಗಳಿಂದ ಬಿಡುಗಡೆಯಾಗುವ ಅಶುದ್ಧ ಗಾಳಿಯನ್ನು ಮರಗಳು ಸೇವಿಸಿ ನಮಗೆ ಶುದ್ಧಗಾಳಿಯನ್ನು ನೀಡುತ್ತವೆ. ಪರಿಸರದಲ್ಲಿ ಸಮತೋಲನದಲ್ಲಿದ್ದರೆ ಕಾಲ ಕಾಲಕ್ಕೆ ತಕ್ಕಂತೆ ಮಳೆ, ಗಾಳಿ, ನೀರು ಎಲ್ಲವೂ ಸಿಗುತ್ತದೆ. ಆದರೆ, ಪ್ರಸ್ತುತ ಮರಗಳನ್ನು ನಾಶದಿಂದ ವಾತಾವರಣದಲ್ಲಿ ಅಶುದ್ದ ಗಾಳಿಯೇ ಹೆಚ್ಚಾಗಿ ಗಾಳಿ, ನೀರು, ಕಲುಶಿತವಾಗಿ ಮಳೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ನಡಿಗೆ-ಹಸಿರಿನ ಕಡೆಗೆ ಅಭಿಯಾನದಡಿ ಚನ್ನಪಟ್ಟಣ ನಗರದಲ್ಲಿ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ತಾಲೂಕು ವಲಯ ಅರಣ್ಯಾಧಿಕಾರಿ ಮಲ್ಲೇಶ್, ಡಾ. ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಬೇವೂರು ಯೋಗೀಶ್ ಗೌಡ, ಎ.ಸಿ. ವೀರೇಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net