ವಾಡಿ: ಚಿರತೆ ದಾಳಿಗೆ ಕುದುರೆಯೊಂದು ಬಲಿಯಾದ ಟನೆ ಗುರುವಾರ ತಡರಾತ್ರಿ ಲಾಡ್ಲಾಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಗ್ರಾಮದ ಸಣ್ಣ ಸಾಬಣ್ಣ ಗೊಡಗ ಅವರ ಹೊಲದ ಮನೆ ಮುಂದೆ ಕಟ್ಟಿದ್ದ ಎತ್ತುಗಳ ಮೇಲೆ ದಾಳಿ ನಡೆಸಲು ಬಂದಿದ್ದ ಚಿರತೆಯು ಅಲ್ಲಿಯೇ ಮೇಯುತ್ತಿದ್ದ ಕುದುರೆ ಮೇಲೆ ಏಕಾಏಕಿ ದಾಳಿ ನಡೆಸಿದೆ. ಕುತ್ತಿಗೆ, ಹೊಟ್ಟೆಯ ಭಾಗವನ್ನು ತಿಂದಿದೆ. ಇದೇ ಸ್ಥಳದಲ್ಲಿ 8 ಎತ್ತುಗಳಿದ್ದವು, ಕುದುರೆ ಮೇಲೆ ದಾಳಿ ನಡೆದಿದ್ದರಿಂದ ಎತ್ತುಗಳು ಬಚಾವ್ ಆಗಿವೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಎತ್ತಿನ ಮೇಲೆ ದಾಳಿ ನಡೆಸಲು ಬಂದಿದ್ದ ಚಿರತೆಗೆ ನಾಯಿ ಬಲಿಯಾಗಿತ್ತು. ಇದೀಗ ಮತ್ತೆ ದಾಳಿ ಮಾಡಿದ್ದು ರೈತರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಮತ್ತು ಪಶುಪಾಲನಾ ಸಿಬ್ಬಂದಿ ಶುಕ್ರವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.