ಬಿಜೆಪಿ ಕಿತ್ತಾಟಕ್ಕೆ ವರಿಷ್ಠರ ಎಚ್ಚರಿಕೆ

ಬಿಜೆಪಿ
ಬಿಜೆಪಿ
Published on
ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಉಲ್ಬಣಗೊಂಡಿದ್ದ ಆಂತರಿಕ ಕಚ್ಚಾಟಕ್ಕೆ ಬ್ರೇಕ್ ಹಾಕುವ ಪ್ರಯತ್ನವನ್ನು ಪಕ್ಷ ಆರಂಭಿಸಿದೆ. ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ವ್ಯಕ್ತಪಡಿಸಬೇಕು. ಬಹಿರಂಗವಾಗಿ ಹೇಳಿಕೆ ಕೊಟ್ಟರೆ ಕ್ರಮ ತೆಗೆದುಕೊಳ್ಳುವುದಾಗಿ ವರಿಷ್ಠರು ಎಚ್ಚರಿಕೆ ಕೊಟ್ಟಿದ್ದಾರೆ.
ಗುರುವಾರ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಡಾ. ರಾಧಾಮೋಹನ್ ದಾಸ್ ಅಗರ್ವಾಲ್, ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದ ಸಂಸದ ಡಾ.ಕೆ. ಸುಧಾಕರ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಶಾಸಕ ಎಸ್.ಆರ್. ವಿಶ್ವನಾಥ್ ಮತ್ತು ಮಾಜಿ ಸಚಿವ ರೇಣುಕಾಚಾರ್ಯ ಅವರನ್ನು ಪ್ರತ್ಯೇಕವಾಗಿ ಕರೆದು ಸಭೆ ನಡೆಸಿದರು.
ಸುಧಾಕರ್ ಮತ್ತು ಎಸ್.ಆರ್. ವಿಶ್ವನಾಥ್ ನಡುವಿನ ಬಹಿರಂಗ ಆರೋಪ-ಪ್ರತ್ಯಾರೋಪ, ಸುದ್ದಿಗೋಷ್ಠಿಗಳನ್ನು ನಡೆಸಿ ಕೊಟ್ಟ ಹೇಳಿಕೆಗಳು ಬಿಜೆಪಿ ನಾಯಕರನ್ನು ಮುಜುಗರಕ್ಕೀಡುಮಾಡಿತ್ತು. ಈ ಬಗ್ಗೆ ರಾಜ್ಯ ನಾಯಕರು ಕೊಟ್ಟ ಮಾಹಿತಿ ಮೇರೆಗೆ ರಾಧಾಮೋಹನ್, ಇಬ್ಬರನ್ನೂ ಪ್ರತ್ಯೇಕವಾಗಿ ಕರೆದು ಸಮಸ್ಯೆಗಳನ್ನು ಆಲಿಸಿದರು. ಇಬ್ಬರ ನಡುವೆ ಸಣ್ಣಪುಟ್ಟ ಗೊಂದಲಗಳಿಗೆ ಪರಿಹಾರವನ್ನು ಕೊಟ್ಟ ರಾಧಾಮೋಹನ್ ಮುಂದೆ ಬಹಿರಂಗವಾಗಿ ಯಾವುದೇ ಹೇಳಿಕೆ ಕೊಡದೆ ಪಕ್ಷ ಸಂಘಟನೆಗೆ ದುಡಿಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net