ಬಸವಕಲ್ಯಾಣ: ನಗರ ಸೇರಿ ತಾಲೂಕಿನ ವಿವಿಧೆಡೆ ಬುಧವಾರ ಬೆಳಗ್ಗೆ ಗುಡುಗು, ಸಿಡಿಲಿನೊಂದಿಗೆ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ವಿವಿಧ ಭಾಗಗಳಲ್ಲಿ ಸಮಸ್ಯೆ ಉಂಟು ಮಾಡಿತ್ತು. ಗಾಳಿಯ ತೀವ್ರತೆಗೆ ನಗರದಲ್ಲಿ 20ರಿಂದ 25 ಕಡೆ ಮರಗಳು ಮುರಿದು ಬಿದ್ದಿವೆ. ನಗರದಲ್ಲಿ 9 ಕಡೆ, ತಾಲೂಕಿನ ವಿವಿಧ ಗ್ರಾಮ ಹುಲಸೂರು ವ್ಯಾಪ್ತಿ ಸೇರಿ ಒಟ್ಟು ಸುಮಾರು 40 ವಿದ್ಯುತ್ ಕಂಬಗಳು ಬಿದ್ದಿವೆ. ನಗರದ ಟೂರಿಸ್ಟ್ ಲಾಡ್ಜ್ ಬಳಿ, ಧಾಮಿ ದಾಬಾ ಬಳಿ ಬೃಹತ್ ಮರಗಳು ರಸ್ತೆಗೆ ಬಿದ್ದಿದ್ದರಿಂದ ಕೆಲ ಕಾಲ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ನಗರದ ಹಲವೆಡೆ ಸಂಜೆವರೆಗೂ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಬೆಳಗ್ಗೆ ಕಚೇರಿ ಹಾಗೂ ಕೆಲಸಗಳಿಗೆ ತೆರಳುವ ಸಾರ್ವಜನಿಕರು ಪರದಾಡುವಂತಾಯಿತು. ನಂತರ ನಗರಸಭೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸಲು ಮತ್ತು ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲು ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತರಾದರು. ತಾಲೂಕಿನ ಎಕಲೂರ ಗ್ರಾಮದಲ್ಲಿ ಮಳೆಯಿಂದ ವ್ಯಕ್ತಿಯೊಬ್ಬರ ಮನೆಯ ಗೋಡೆ ಕುಸಿದಿದ್ದು, ಆದರೆ ಯಾವುದೇ ಜೀವಹಾನಿ ಆಗಿಲ್ಲ. ಬಿರುಗಾಳಿ ಸಮೇತ ಮಳೆಗೆ ಕೆಲವೆಡೆ ಮನೆಗಳ ಮೇಲಿನ ಪತ್ರಾಸ್ ಹಾರಿ ಹೋಗಿರುವುದು ತಿಳಿದು ಬಂದಿದೆ. ಮಂಠಾಳ ಗ್ರಾಮದಲ್ಲಿ ಮರವೊಂದು ನೆಲಕ್ಕುರುಳಿದಿರುವುದರಿಂದ ಎತ್ತಿನ ಕಾಲು ಮುರಿದು ಗಾಯ ಗೊಂಡ ಟನೆ ನಡೆದಿದೆ.