ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಸೋಮವಾರ ಗರಿಷ್ಠ ತಾಪಮಾನದಲ್ಲಿ 40 ಡಿ.ಸೆ.ಉಷ್ಣಾಂಶ ದಾಟಿದೆ. ರಾಜ್ಯದ ಇತರ ಜಿಲ್ಲೆಗಳಿಗಿಂತ ಕಲಬುರಗಿಯಲ್ಲಿ 41.7 ಡಿ.ಸೆ.ಉಷ್ಣಾಂಶ ದಾಖಲಾಗಿತ್ತು. ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಬೆಂ.ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನದಲ್ಲಿ 35-37ಡಿ.ಸೆ. ಉಷ್ಣಾಂಶ ಕಂಡುಬಂದಿದ್ದು, ವಾಡಿಕೆಗಿಂತ 1-2 ಡಿ.ಸೆ.ಉಷ್ಣಾಂಶ ಜಾಸ್ತಿಯಾಗಿದೆ. ತೇವಾಂಶ ಭರಿತ ಮೋಡ, ಮಳೆ ಮುನ್ಸೂಚನೆ ಇಲ್ಲದಿರುವುದು ಮತ್ತು ತಿಳಿ ವಾತಾವರಣ ಸೇರಿ ಇತರ ಕಾರಣಗಳಿಂದ ಬಿಸಿಲು ಜಾಸ್ತಿಯಾಗಿದೆ ಎನ್ನುತ್ತಾರೆ ಹಿರಿಯ ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿ.