ದಶಕಗಳಿಂದ ಮೂಲಸೌಲಭ್ಯ ಕಾಣದ ಹಯ್ಯಾಳ(ಕೆ)

ವಡಗೇರಾ ತಾಲೂಕಿನ ಹಯ್ಯಾಳ(ಕೆ) ಗ್ರಾಮದಲ್ಲಿ ಶುಕ್ರವಾರ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಭೀಮಾಶಂಕರ, ಸೂಗಯ್ಯ, ಮಾದೇಶ, ಹಣಮಂತ, ದೊಡ್ಡಪ್ಪ, ದೇವಪ್ಪ, ನಿಂಗಪ್ಪ, ಬಸವರಾಜ, ಬಸ್ಸು, ದೇವಕೆಮ್ಮ, ತಿಪ್ಪಮ್ಮ, ನಿಂಗಮ್ಮ, ಸೋಪಮ್ಮ, ಮಲ್ಲಮ್ಮ, ಮರೆಮ್ಮ, ದೇವಿಂದ್ರಮ್ಮ ಇತರರಿದ್ದರು.
ವಡಗೇರಾ ತಾಲೂಕಿನ ಹಯ್ಯಾಳ(ಕೆ) ಗ್ರಾಮದಲ್ಲಿ ಶುಕ್ರವಾರ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಭೀಮಾಶಂಕರ, ಸೂಗಯ್ಯ, ಮಾದೇಶ, ಹಣಮಂತ, ದೊಡ್ಡಪ್ಪ, ದೇವಪ್ಪ, ನಿಂಗಪ್ಪ, ಬಸವರಾಜ, ಬಸ್ಸು, ದೇವಕೆಮ್ಮ, ತಿಪ್ಪಮ್ಮ, ನಿಂಗಮ್ಮ, ಸೋಪಮ್ಮ, ಮಲ್ಲಮ್ಮ, ಮರೆಮ್ಮ, ದೇವಿಂದ್ರಮ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೋಲಿ ಸಮಾಜದ ಉಮೇಶ ಮುದ್ನಾಳ ನೇತೃತ್ವದಲ್ಲಿ ತಮಟೆ ಚಳವಳಿ
ಯಾದಗಿರಿ: ಸುಮಾರು ಎಂಟು ದಶಕಗಳಿಂದ ಕನಿಷ್ಠ ಮೂಲಸೌಲಭ್ಯ ಕಾಣದ ಊರೊಂದಿದೆ ಎಂದರೆ ನೀವು ನಂಬಲೇಬೇಕು. ಹೌದು, ಇದು ಇರೋದು ವಡಗೇರಾ ತಾಲೂಕಿನ ಟಿ.ವಡಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಯ್ಯಾಳ(ಕೆ) ಗ್ರಾಮ.
ಈ ಊರಿನ ದಲಿತರು, ಶೋಷಿತರು, ಹಿಂದುಳಿದವರು ಮತ್ತು ಕಡುಬಡವರು ವಾಸಿಸುವ ಬಡಾವಣೆಗಳಲ್ಲಿ ಒಂದೇ ಒಂದು ಸೌಲಭ್ಯ ನೀಡಲು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಂದ ಸಾಧ್ಯವಾಗದಿರುವುದು ಎಷ್ಟರ ಮಟ್ಟಿಗೆ ನಿರ್ಲಕ್ಷಕ್ಕೆ ಒಳಗಾಗಿದೆ ಎಂಬುದನ್ನು ಸಾಕ್ಷೀಕರಿಸುತ್ತದೆ.
ಗಬ್ಬೆದ್ದ ತೆರೆದ ಭಾವಿ, ಹಾಳಾದ ಶುದ್ಧ ಕುಡಿಯುವ ನೀರಿನ ಘಟಕ, ಅಪಾಯಕ್ಕೆ ಆಹ್ವಾನಿಸುತ್ತಿರುವ ವಿದ್ಯುತ್​ ಟ್ರಾನ್ಸ್​ಫಾರ್ಮರ್ಸ್​, ಉದ್ಘಾಟನೆಗಾಗಿ ಕೈಬೀಸಿ ಕರೆಯುತ್ತಿರುವ ನೀರಿನ ಟ್ಯಾಂಕ್​, ಸಿಸಿ ರಸ್ತೆ, ಚರಂಡಿ ಇಲ್ಲದೆ ತಗ್ಗುಗಳಲ್ಲಿ ನಿಂತ ಕಲುಷಿತ ನೀರು, ಮಹಿಳಾ ಶೌಚಗೃಹ ಕೊರತೆ, ತೂತು ಬಿದ್ದ ಪೈಪ್​ಲೈನ್​, ಹಯ್ಯಾಳ(ಕೆ)-ಮುನಮುಟಗಿ ರಸ್ತೆಯುದ್ದಕ್ಕೂ ಜಾಲಿ ಕಂಟಿ ಬೆಳೆದಿದ್ದರಿಂದ ಜಮೀನಿಗೆ ತೆರಳದಂಥ ಸ್ಥಿತಿ, ಎಲ್ಲೆಂದರಲ್ಲಿ ವಿಷಜಂತುಗಳ ವಾಸ, ವಿದ್ಯುತ್​ ಕಣ್ಣಾಮುಚ್ಚಾಲೆ ಹೀಗೆ ನೂರೆಂಟು ಸೌಕರ್ಯಗಳಿಂದ ವಂಚಿತವಾಗಿದೆ. ಸುಮಾರು 300 ಮನೆಗಳಿರುವ ಊರಿನಲ್ಲಿ 2000 ಜನಸಂಖ್ಯೆ ಇದೆ. ಪ್ರಭಾವಿಗಳಿರುವ ಏರಿಯಾ ಮಾತ್ರ ಸ್ವಲ್ಪ ಸುಧಾರಣೆ ಕಂಡಿದ್ದು ಬಿಟ್ಟರೇ ಜಿಲ್ಲೆ ನಕಾಶೆಯಲ್ಲಿ ಈ ಊರು ಇದ್ದೂ ಇಲ್ಲದಂತಿದೆ.
ಇಂತಹ ಗ್ರಾಮದ ಸುಧಾರಣೆಗಾಗಿ ಹೋರಾಟದ ಹೆಜ್ಜೆ ಇಟ್ಟ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಮುದ್ನಾಳ ಶುಕ್ರವಾರ ಬೆಳಗ್ಗೆ ನೂರಾರು ಜನರೊಂದಿಗೆ ಜಿಟಿಜಿಟಿ ಮಳೆಯಲ್ಲೇ ಕೈಯಲ್ಲಿ ಖಾಲಿ ಕೊಡ ಮತ್ತು ಬಾರಿಗೆ ಹಿಡಿದು ತಮಟೆ ಭಾರಿಸುತ್ತ ಊರಿನಾದ್ಯಂತ ಪಾದಯಾತ್ರೆ ನಡೆಸಿ ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ. 
ಊರಲ್ಲಿ ಕನಿಷ್ಠ ಸೌಲಭ್ಯ ಒದಗಿಸದಿದ್ದರೆ ವಡಗೇರಾದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು. ಏಳೆಂಟು ದಶಕಗಳಿಂದ ಅಭಿವೃದ್ಧಿಗಾಗಿ ಬಂದ ಹಣ ಯಾರ ಜೇಬು ಮತ್ತು ಮನೆ ಸೇರಿದೆ ಎಂದು ಪ್ರಶ್ನಿಸಿದ ಮುದ್ನಾಳ, ಶುದ್ಧ ನೀರು, ವಿದ್ಯುತ್​, ಉತ್ತಮ ರಸ್ತೆ, ಶಿಕ್ಷಣ, ಆರೋಗ್ಯ, ಸಾರಿಗೆ ಸೇವೆ ನೀಡಲೆಂದೇ ಕೋಟ್ಯಂತರ ರೂ. ಅನುದಾನ ಸರ್ಕಾರದಿಂದ ಬಿಡುಗಡೆಯಾದರೂ ಇಲ್ಲಿ ಒಂದೇ ಒಂದು ನೆನಪಿಡುವಂಥ ಕೆಲಸವಾಗಿಲ್ಲ. ಊರಿನ ಜನರ ಯಾತನಾಮಯ ಬದುಕು ಆಡಳಿತ ಮತ್ತು ಜನಪ್ರನಿಧಿಗಳ ಕಾಣಿಸುತ್ತಿಲ್ಲವೇ ಎಂದು ಗುಡುಗಿದರು.
ಪ್ರಮುಖರಾದ ಭೀಮಾಶಂಕರ, ಸೂಗಯ್ಯ, ಮಾದೇಶ, ರತ್ನಪ್ಪ, ಗಿರೀಶ, ಸಾಬಣ್ಣ, ಸಿದ್ದಪ್ಪ, ತಿಪ್ಪಣ್ಣ, ಅಯ್ಯಪ್ಪ, ಲಾಳೇಸಾಬ್​, ರಾಜೇಸಾಬ್​, ಕಾಶಪ್ಪ, ಬಸಪ್ಪ, ಶಾಂತಪ್ಪ, ಗೌಡಪ್ಪ, ಹಣಮಂತ, ದೊಡ್ಡಪ್ಪ, ದೇವಪ್ಪ, ನಿಂಗಪ್ಪ, ಬಸವರಾಜ, ಬಸ್ಸು, ಯಂಕಪ್ಪ, ನಿಂಗಪ್ಪ, ಮಾನಪ್ಪ, ಬಡ್ಡೆಪ್ಪ, ಭೀಮರಾಯ ದೇವಕೆಮ್ಮ, ತಿಪ್ಪಮ್ಮ, ನಿಂಗಮ್ಮ, ಸೋಪಮ್ಮ, ಮಲ್ಲಮ್ಮ, ಮರೆಮ್ಮ, ದೇವಿಂದ್ರಮ್ಮ ಇತರರಿದ್ದರು.
"

ಶಾಸಕರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಯ್ಯಾಳ(ಕೆ)ಗೆ ಕೂಡಲೇ ಭೇಟಿ ನೀಡಿ ಅಗತ್ಯ ಸೌಲಭ್ಯ ಒದಗಿಸುವತ್ತ ಗಮನಹರಿಸಬೇಕು. ಇಲ್ಲವಾದರೆ ಯಾದಗಿರಿ-ಸುರಪುರ ಮುಖ್ಯ ರಸ್ತೆಯಲ್ಲಿ ಬಾರಕೋಲು ಹಿಡಿದು ಬೃಹತ್​ ಪ್ರತಿಭಟನೆ ನಡೆಸಲಾಗುವುದು.

— > ಉಮೇಶ ಮುದ್ನಾಳ ರಾಜ್ಯ ಸಂಘಟನಾ ಕಾರ್ಯದರ್ಶಿ, ಕೋಲಿ ಸಮಾಜ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net