ಕನಕಪುರ : 12ನೇಯ ಶತಮಾನದ ವಚನಕಾರ ಹಾಗೂ ಸಾಮಾಜಿಕ ಕ್ರಾಂತಿ ಹರಿಕಾರ ಹಡಪದ ಅಪ್ಪಣ್ಣ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಅವರ ವಚನ ಸಮಾಜಕ್ಕೆ ದಾರಿದೀಪವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಪ್ಪಣ್ಣನವರ ಜೀವನ ಚರಿತ್ರೆ ತಿಳಿದುಕೊಳ್ಳುವ ಜತೆಗೆ ಅವರ ತತ್ವ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಕ್ರಾಂತಿಕಾರಿ ಬಸವಣ್ಣನವರ ಕಾರ್ಯದರ್ಶಿಯಾಗಿ, 12ನೇ ಶತಮಾನದ ವಚನ ಚಳವಳಿಯ ಪ್ರಮುಖ ಶರಣರಾಗಿ, ಆದರ್ಶ ಸಮಾಜಕ್ಕೆ ಶ್ರಮಿಸಿದರು.
ಸಮಾಜಕ್ಕೆ ಮಾದರಿಯಾಗಿ ಜಾತಿ, ಅಸಮಾನತೆ ವಿರೋಧಿಸಿ ಸಮಾಜ ಸುಧಾರಣೆಗೆ ವಿಶೇಷ ಕೊಡುಗೆ ನೀಡಿದ್ದಾರೆ.ಹಡಪದ ಅಪ್ಪಣ್ಣ 250 ವಚನ ರಚಿಸಿದರೆ ಅವರ ಪತ್ನಿ ಶರಣೆ ಲಿಂಗಮ್ಮನವರು 114 ವಚನ ರಚಿಸಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಸವಿತ ಸಮಾಜದ ತಾಲೂಕು ಅಧ್ಯಕ್ಷ ಶಿವರಾಮ್ ಮಾತನಾಡಿ, ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಚನ್ನವೀರಪ್ಪ ಮತ್ತು ದೇವಕ್ಕೆಮ್ಮನವರ ಪುತ್ರರಾಗಿ ಕ್ಷೌರಿಕ ಕಾಯಕದ ಮೂಲಕ ನಿಷ್ಠೆ, ಸೇವಾ ಮನೋಭಾವನೆಯುಳ್ಳ ವಿಶೇಷ ವ್ಯಕ್ತಿಯಾಗಿದ್ದರು.ಸವಿತ ಸಮಾಜದ ಮೇಲಿನ ಶೋಷಣೆ ಹಾಗೂ ಅಸಮಾನತೆ, ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ಮಟ್ಟದಲ್ಲಿ ಇಂದಿಗೂ ಮುಂದುವರಿಯುತ್ತಿದೆ.
ನಮಗೆ ರಾಜಕೀಯ ಸ್ಥಾನಮಾನ ಸಮರ್ಪಕವಾಗಿ ಲಭಿಸುತ್ತಿಲ್ಲ. ತಾಲೂಕು ಮತ್ತು ಜಿಲ್ಲಾ ಕೇಂದ್ರ ಹಾಗೂ ಸರ್ಕಾರಿ ವಾಣಿಜ್ಯ ಕೇಂದ್ರದಲ್ಲಿ ಮೀಸಲಾತಿ ಹಾಗೂ ರಿಯಾಯಿತಿ ದರದಲ್ಲಿ ಅಂಗಡಿ ನೀಡುವ ವ್ಯವಸ್ಥೆ ಸರ್ಕಾರ ಮಾಡಬೇಕಿದೆ ಎಂದರು.
ಈಗಾಗಲೇ ಹೊರಗಿನಿಂದ ಬಂದ ಕೆಲವರು ಹೈಟೆಕ್ ಸೆಲೂನ್ ಮಾಡುತ್ತಿದ್ದಾರೆ, ಇದರಿಂದ ನಮಗೆ ಜೀವನೋಪಾಯಕ್ಕೂ ತೊಂದರೆಯಾಗುತ್ತಿದೆ. ಪ್ರಮುಖವಾಗಿ ಸವಿತ ಸಮಾಜದ ಜನಾಂಗದವರು ಒಗ್ಗೂಡಿ, ಸಂಘಟಿತರಾಗಬೇಕು, ನಮ್ಮದೊಂದು ಸಮುದಾಯ ಭವನ ನಿರ್ಮಿಸಲು ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯ ಅವರ ಅವಧಿಯಲ್ಲಿ ನಿವೇಶ ನೀಡಲಾಗಿತ್ತು.
ಕಳೆದ ಹತ್ತು ವರ್ಷಗಳ ಹಿಂದೆ ಬಸ್ ನಿಲ್ದಾಣ ನಿರ್ಮಾಣ ಮಾಡುವ ನೆಪದಲ್ಲಿ ನಿವೇಶನ ಕಳೆದುಕೊಳ್ಳಲಾಗಿತ್ತು. ಅಲ್ಲಿಂದ ಇಲ್ಲಿಯವರೆವಿಗೂ ಪರ್ಯಾಯ ನಿವೇಶನ ನಮಗೆ ನೀಡಿಲ್ಲ, ಈಗಲಾದರೂ ಡಿ.ಕೆ.ಶಿವಕುಮಾರ್ ಅವರು ಸಹಕಾರ ನೀಡಬೇಕು. ಈ ಸಂಬಂಧ ಈಗಾಗಲೇ ನಮ್ಮ ಸಮಾಜದಿಂದ ಮೂರ‌್ನಾಲ್ಕು ಮನವಿ ಸಲ್ಲಿಸಲಾಗಿದೆ ಎಂದರು.
ಶಿರಸ್ತೇದಾರ್‌ಗಳಾದ ವಸಂತಕುಮಾರಿ, ರಘು, ಸಾಹಿತಿ ಕೂ.ಗಿ.ಗಿರಿಯಪ್ಪ, ಸವಿತ ಸಮಾಜದ ಗೌರವಾಧ್ಯಕ್ಷ ವರದರಾಜು, ಅಗರ ನಾಗರಾಜು, ಮಂಜುನಾಥ್, ನಗರಾಧ್ಯಕ್ಷ ಚಿನ್ನಿಗಿರಿಯಪ್ಪ, ಕಾರ್ಯದರ್ಶಿ ಪ್ರೇಮ್‌ಕುಮಾರ್, ಖಜಾಂಚಿ ರಾಮಸ್ವಾಮಿ, ಎಲ್.ಎಲ್.ರವಿ, ವೈರಮುಡಿ, ಸೀನಪ್ಪ, ವೆಂಕಟೇಶ್‌ಮೂರ್ತಿ ಇದ್ದರು.