ರಾಮದುರ್ಗ: ತಾಲೂಕಿನ ಹದಗೆಟ್ಟ ರಸ್ತೆಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹಂತ ಹಂತವಾಗಿ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಅಶೋಕ ಪಟ್ಟಣ ಭರವಸೆ ನೀಡಿದರು.
ತಾಲೂಕಿನ ಕಲಹಾಳ&ಚಿಕ್ಕೊಪ್ಪ 1.85 ಕೋಟಿ ರೂ., ಕಿತ್ತೂರ ಕ್ರಾಸ್& ಕುರುವಿನಕೊಪ್ಪ ಹದ್ದಿನ ವರೆಗೆ 2.25 ಕೋಟಿ ರೂ. ಹಾಗೂ 2 ಕೋಟಿ ರೂ.ವೆಚ್ಚದ ಮುಳ್ಳೂರ&ಸುರೇಬಾನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸದ್ಯಕ್ಕೆ ಮುಳ್ಳೂರ ಗ್ರಾಮದಿಂದ ಕ್ರಿಯಾ ಯೋಜನೆಯಂತೆ ಅಭಿವೃದ್ಧಿಪಡಿಸಿ, ಮುಂಬರುವ ದಿನಗಳಲ್ಲಿ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಯಶಸ್ವಿ ಅನುಷ್ಠಾನದ ಜತೆಗೆ ಅಭಿವೃದ್ಧಿಗೂ ಒತ್ತು ನೀಡುತ್ತಿದೆ. ಗ್ರಾಮಸ್ಥರ ಸಹಕಾರ ಮುಖ್ಯವಾಗಿದೆ ಎಂದು ತಿಳಿಸಿದರು.
ಮುಖಂಡರಾದ ಶಂಕರಗೌಡ ಪಾಟೀಲ, ದ್ಯಾವಪ್ಪ ಬೆಳವಡಿ, ಚಿನ್ನಪ್ಪ ಮುದೇನೂರ, ನಾಗಪ್ಪ ಚಂದರಗಿ, ಪಿಡಬ್ಲುಡಿ ಎಇಇ ರವಿಕುಮಾರ, ಎ.ಆರ್.ರೂಗಿ, ಕಲಹಾಳ, ಕಿತ್ತೂರು ಹಾಗೂ ಕಲ್ಲೂರ ಗ್ರಾಮಸ್ಥರು ಇದ್ದರು.