ಹುಮನಾಬಾದ್: ಸೇವಾನಿರತ ಶಿಕ್ಷಕರಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕಡ್ಡಾಯಗೊಳಿಸಿರುವ ಎನ್ಸಿಟಿಇ ಮಾರ್ಗಸೂಚಿಯನ್ನು ತಿದ್ದುಪಡಿ ಮಾಡಿ ಅವರಿಗೆ ಟಿಇಟಿ ಪರೀಕ್ಷೆಯಿಂದ ಸಂಪೂರ್ಣ ವಿನಾಯಿತಿ ನೀಡಬೇಕು ಅಥವಾ ನಿಯಮವನ್ನು ರದ್ದುಗೊಳಿಸಬೇಕು ಎಂದು ಸಾವಿತ್ರಿಬಾಯಿ ಫುಲೆ ನ್ಯಾಷನಲ್ ವುಮೆನ್ ಟೀಚರ್ಸ್ ಫೆಡರೇಷನ್ ಆಗ್ರಹಿಸಿದೆ. ಬೀದರ್ನಲ್ಲಿ ಭಾನುವಾರ ಸಂಸದ ಸಾಗರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದ ಫೆಡರೇಷನ್ ಪದಾಧಿಕಾರಿಗಳು, ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರಿಗೆ ಮತ್ತೆ ಟಿಇಟಿ ಪರೀಕ್ಷೆ ಕಡ್ಡಾಯಗೊಳಿಸಿರುವುದು ನ್ಯಾಯಸಮ್ಮತವಲ್ಲ. ಶಾಲೆಯ ಜವಾಬ್ದಾರಿಯೊಂದಿಗೆ ಕುಟುಂಬ ನಿರ್ವಹಿಸುತ್ತಿರುವ ಶಿಕ್ಷಕಿಯರಿಗೆ ಮತ್ತೊಂದು ಪರೀಕ್ಷೆಯ ಒತ್ತಡ ಹೇರುವುದು ಬೋಧನಾ ಗುಣಮಟ್ಟ ಹಾಗೂ ಮಾನಸಿಕ ನೆಮ್ಮದಿಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು. ಕೇಂದ್ರ ಶಿಕ್ಷಣ ಸಚಿವಾಲಯ ಈ ವಿಫಿಯದಲ್ಲಿ ತಕ್ಷಣ ಮಧ್ಯಪ್ರವೇಶಿಸಿ, ಸೇವಾನಿರತ ಶಿಕ್ಷಕರಿಗೆ ಟಿಇಟಿ ಪರೀಕ್ಷೆಯಿಂದ ವಿನಾಯಿತಿ ನೀಡುವಂತೆ ಎನ್ಸಿಟಿಇ ನಿಯಮಾವಳಿಗೆ ಅಗತ್ಯ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು. ಫೆಡರೇಷನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷೆ ಡಾ. ಸಾರಿಕಾ ಎಸ್.ಗಂಗಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶಾಂತಾಬಾಯಿ ಬಿರಾದಾರ, ಬೀದರ್ ತಾಲೂಕು ಅಧ್ಯಕ್ಷೆ ನರಸಮ್ಮ ಪಾಟೀಲ್, ಭಾಲ್ಕಿ ತಾಲೂಕು ಅಧ್ಯಕ್ಷೆ ಕೀರ್ತಿಲತಾ, ಜಿಲ್ಲಾ ಜಿಪಿಟಿ ಮುಖ್ಯಸ್ಥೆ ಭಾನುಪ್ರಿಯಾ, ದತ್ತೇಶ್ವರಿ, ದೀಪಾ, ಶ್ರೀದೇವಿ, ಸುವರ್ಣ, ಸವಿತಾ ಇತರರಿದ್ದರು.