ಗ್ರಾ.ಪಂ.ಗೆ ಕೇಂದ್ರದಿಂದ ಬರಬೇಕಿದೆ ₹2,100 ಕೋಟಿ

ದಿನೇಶ್ ಗೂಳಿಗೌಡ
ದಿನೇಶ್ ಗೂಳಿಗೌಡ
Published on
ಬೆಂಗಳೂರು: ಕೇಂದ್ರ 15ನೇ ಹಣಕಾಸು ಆಯೋಗದಲ್ಲಿ ಬಾಕಿ ಇರುವ 2,100 ಕೋಟಿ ರೂ. ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ತುರ್ತಾಗಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಕಾಂಗ್ರೆಸ್ ಶಾಸಕರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿರುವ ಕಾಂಗ್ರೆಸ್‌ನ ದಿನೇಶ್ ಗೂಳಿಗೌಡ, ಸಲೀಂ ಅಹ್ಮದ್ ಸೇರಿ 11 ಶಾಸಕರು, ಮುಖ್ಯಮಂತ್ರಿ, ಡಿಸಿಎಂ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದಾರೆ.
ಗ್ರಾಮೀಣಾಭಿವೃದ್ಧಿಯ ಜೀವನಾಡಿಯಂತಿರುವ ಗ್ರಾಪಂಗಳಿಗೆ 15ನೇ ಹಣಕಾಸು ಆಯೋಗದ ಅನುದಾನ ಬರದೆ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಸೊರಗುವಂತಾಗಿದೆ. ಇದು ಅಭಿವೃದ್ಧಿ ಕಾರ್ಯಗಳನ್ನು ಮರೀಚಿಕೆ ಮಾಡುವುದಲ್ಲದೆ, ಗ್ರಾಮೀಣ ವ್ಯವಸ್ಥೆಯನ್ನು ದುರ್ಬಲ ಮಾಡುತ್ತಿದೆ. ಆ ಮೊತ್ತದಲ್ಲಿ ಮೊದಲ ಕಂತು 1,092 ಕೋಟಿ ರೂ. ಇಂದಿನವರೆಗೂ ಬಿಡುಗಡೆಯಾಗಿಲ್ಲ. ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಯಾಗಿದ್ದರೂ ಕರ್ನಾಟಕಕ್ಕೆ ಆಗಿಲ್ಲ. ಕೇಂದ್ರದ ಎಲ್ಲ ಷರತ್ತು ಪೂರೈಸಿರುವ ಕರ್ನಾಟಕಕ್ಕೆ ಅನುದಾನ ಸಿಗದಿರುವುದು ಗ್ರಾಮೀಣ ಭಾಗದ ಅಭಿವೃದ್ಧಿಗೆ ಕುಂಠಿತವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರತಿ ಗ್ರಾಪಂಗೆ 30ರಿಂದ 60 ಲಕ್ಷ ರೂ. ಅನುದಾನ ಸಿಗುತ್ತಿತ್ತು. ಅನುದಾನವಿಲ್ಲದೆ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಚುನಾಯಿತ ಪ್ರತಿನಿಧಿಗಳ ಆಡಳಿತ ಅವಧಿ ಫೆಬ್ರವರಿಗೆ 2026ಕ್ಕೆ ಮುಕ್ತಾಯಗೊಳ್ಳಲಿದೆ. ಅಧಿಕಾರ ಅವಧಿ ಮುಗಿಯಲು ಕೇವಲ ಒಂದೂವರೆ ತಿಂಗಳು ಮಾತ್ರ ಬಾಕಿ ಇದ್ದು, ಅನುದಾನ ಬಿಡುಗಡೆಯಾಗದಿದ್ದಲ್ಲಿ ಅಗತ್ಯ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ.
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯಿಂದಾಗಿ ತಾಂತ್ರಿಕ ಅಡಚಣೆ ಉಂಟಾಗಿದ್ದು, ರಾಜ್ಯದ 800 ಹೆಚ್ಚು ಪಂಚಾಯಿತಿಗಳು ತಮ್ಮಲ್ಲಿರುವ ಅಲ್ಪಸ್ವಲ್ಪ ಹಣವನ್ನು ಬಳಸಿಕೊಳ್ಳಲಾಗದೆ ಪರದಾಡುತ್ತಿವೆ. ಈ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಬೇಕಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net