ರಾಜ್ಯದಲ್ಲಿ ಎಬೋಲಾ ನಿಯಂತ್ರಣಕ್ಕೆ ಸರ್ಕಾರ ಮುನ್ನೆಚ್ಚರಿಕೆ

Ebola virus
Ebola virus
Published on

ಪ್ರಮುಖ ಮುಖ್ಯಾಂಶಗಳು

  • * ಬೆಂಗಳೂರು, ಮಂಗಳೂರಲ್ಲಿ ಐಸೋಲೇಷನ್ ಕೇಂದ್ರ
  • * ಶಂಕಿತರನ್ನು ಅಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಸೌಲಭ್ಯ
ಬೆಂಗಳೂರು : ಎಬೋಲಾ ಕುರಿತು ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚಿಸಿ ಕೇಂದ್ರ ಸರ್ಕಾರ ಎಸ್‌ಒಪಿ ಹೊರಡಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ ಹಾಗೂ ಮಂಗಳೂರಿನಲ್ಲಿ ಶ್ರೀನಿವಾಸ್ ಪೋರ್ಟ್ ಆಸ್ಪತ್ರೆಯನ್ನು ಐಸೋಲೇಷನ್ ಕೇಂದ್ರವಾಗಿ ಗುರುತಿಸಿದೆ.
ಈ ಸಂಬಂಧ ಆರೋಗ್ಯ ಇಲಾಖೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಬೆಂಗಳೂರಿನ ಎಪಿಡೆಮಿಕ್ ಡಿಸೀಸ್ ಆಸ್ಪತ್ರೆ ಹಾಗೂ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗಳನ್ನು ಚಿಕಿತ್ಸಾ ಕೇಂದ್ರಗಳಾಗಿ ಗೊತ್ತುಪಡಿಸಿದೆ. ಇದಲ್ಲದೆ ಸಂಶಯಾಸ್ಪದ ರೋಗಿಗಳನ್ನು ಆಸ್ಪತ್ರೆಗೆ ಸಾಗಿಲು ಆಂಬುಲೆನ್ಸ್ ಸೇವೆಯನ್ನೂ ಸಿದ್ಧವಾಗಿಡಲಾಗಿದೆ. ಶಂಕಿತ ರೋಗಿಗಳಿಂದ ಮಾದರಿ ಸಂಗ್ರಹಿಸಿ ಬೆಂಗಳೂರಿನ ರಾಷ್ಟ್ರೀಯ ವೈರಾಣು ಕೇಂದ್ರದ ಮೂಲಕ ಪುಣೆ ರಾಷ್ಟ್ರೀಯ ವೈರಾಣು ಕೇಂದ್ರಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.
ಕಾಂಗೋ ಮತ್ತು ಉಗಾಂಡದಲ್ಲಿ ಎಬೋಲಾ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಣ್ಗಾವಲು, ಆಸ್ಪತ್ರೆ ಸನ್ನದ್ಧತೆ ಮತ್ತು ಕ್ಷಿಪ್ರ ಪ್ರತಿಕ್ರಿಯೆ ವ್ಯವಸ್ಥೆಗಳನ್ನು ಬಲಪಡಿಸುವಂತೆ ಸೂಚಿಸಿದೆ. ಅದರ ಬೆನ್ನಲ್ಲೇ ರಾಜ್ಯ ಸರ್ಕಾರ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

21 ದಿನ ಮೇಲ್ವಿಚಾರಣೆ:

ಎಬೋಲಾ ಸಂಬಂಧ ಸಾರ್ವಜನಿಕರು ಅನಗತ್ಯ ಆತಂಕಕ್ಕೆ ಒಳಗಾಗದೆ ಅಧಿಕೃತ ಮಾಹಿತಿ ಪರಿಗಣಿಸುವಂತೆ ಸೂಚಿಸಿರುವ ಆರೋಗ್ಯ ಇಲಾಖೆ, ಎಬೋಲಾ ಪೀಡಿತ ದೇಶಗಳಿಗೆ ಪ್ರಯಾಣ ಮಾಡಿದವರು ಭಾರತಕ್ಕೆ ಮರಳಿದ ನಂತರ 21 ದಿನ ಆರೋಗ್ಯ ಮೇಲ್ವಿಚಾರಣೆ ಹಾಗೂ ಪ್ರತ್ಯೇಕ ವೀಕ್ಷಣೆಯಲ್ಲಿ ಇರಬೇಕು. ಯಾವುದೇ ರೋಗ ಲಕ್ಷಣಗಳು ಕಂಡುಬಂದರೆ ಅವರು ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ವರದಿ ಮಾಡಬೇಕೆಂದು ಸೂಚಿಸಿದೆ.

ರೋಗ ಲಕ್ಷಣಗಳು

ಎಬೋಲಾ ಗಂಭೀರ ವೈರಾಣು ಸೋಂಕಾಗಿದ್ದು, ಜ್ವರ, ತಲೆನೋವು, ಸ್ನಾಯು ನೋವು, ಗಂಟಲು ನೋವು, ವಾಂತಿ, ತೀವ್ರ ಅತಿಸಾರ, ಹೊಟ್ಟೆ ನೋವು, ದದ್ದು ಹಾಗೂ ಕಣ್ಣು ಕೆಂಪಾಗುವ ಲಕ್ಷಣಗಳನ್ನು ಉಂಟು ಮಾಡಲಿದೆ.
ಯಾರಿಗೆ ಅಪಾಯ?
ಶಂಕಿತ ಹಾಗೂ ಸೋಂಕಿತ ವ್ಯಕ್ತಿಗಳ ರಕ್ತ, ಅಂಗಗಳು, ದೇಹದ ದ್ರವಗಳೊಂದಿಗೆ ನೇರ ಸಂಪರ್ಕ ಅಥವಾ ಹಾಸಿಗೆ, ಬಟ್ಟೆ, ಸಿರಿಂಜ್‌ನಂತಹ ಕಲುಷಿತ ವಸ್ತುಗಳ ಸಂಪರ್ಕದಿಂದ ರೋಗ ಹರಡುತ್ತದೆ. ವಿಶೇಷವಾಗಿ ಆರೋಗ್ಯ ಸಿಬ್ಬಂದಿ ಮತ್ತು ಸೋಂಕಿತ ವ್ಯಕ್ತಿಯ ಕುಟುಂಬದ ಸದಸ್ಯರು ಹಾಗೂ ನಿಕಟ ಸಂಪರ್ಕದಲ್ಲಿರುವವರು ಹೆಚ್ಚಿನ ಅಪಾಯದಲ್ಲಿರುತ್ತಾರೆ. ಹಾಗಾಗಿ ಮುನ್ನೆಚ್ಚರಿಕೆ ವಹಿಸುವ ತುರ್ತು ಅಗತ್ಯವಿದೆ.

ಮುನ್ನೆಚ್ಚರಿಕೆ ಕ್ರಮಗಳು

* ಐಡಿಎಸ್‌ಪಿ ಅಡಿಯಲ್ಲಿ ತೀವ್ರ ನಿಗಾ ವ್ಯವಸ್ಥೆ ಮತ್ತು ಅನುಮಾನಾಸ್ಪದ ಪ್ರಕರಣಗಳ ಮೇಲ್ವಿಚಾರಣೆ.
* ವಿಮಾನ ನಿಲ್ದಾಣಗಳು ಮತ್ತು ಪ್ರವೇಶ ಕೇಂದ್ರಗಳೊಂದಿಗೆ ಸಮನ್ವಯ ವ್ಯವಸ್ಥೆ.
* ಪ್ರತ್ಯೇಕ ಕ್ವಾರಂಟೈನ್ ಮತ್ತು ಐಸೋಲೇಷನ್ ಸೌಲಭ್ಯಗಳು ಹಾಗೂ ರೆಫರಲ್ ಆಂಬುಲೆನ್ಸ್ ವ್ಯವಸ್ಥೆ.
* ಆರೋಗ್ಯ ಸಿಬ್ಬಂದಿಗೆ ತರಬೇತಿ ಹಾಗೂ ಸೋಂಕು ನಿಯಂತ್ರಣ ಕ್ರಮಗಳ ಬಲಪಡಿಸುವಿಕೆ.
* ಅಗತ್ಯ ಪಿಪಿಇ ಕಿಟ್, ಔಷಧ ಹಾಗೂ ಪ್ರಯೋಗಾಲಯ ಸೌಲಭ್ಯಗಳ ಸಿದ್ಧತೆ.
* ತ್ವರಿತ ಪ್ರತಿಕ್ರಿಯಾ ತಂಡ (ರ‌್ಯಾಪಿಡ್ ರೆಸ್ಪಾನ್ಸ್ ಟೀಮ್) ಗಳನ್ನು ಸಜ್ಜುಗೊಳಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net