ಶಾಲಾ ಪಠ್ಯಕ್ರಮ ಮರು ರಚನೆಗೆ ಸುಸಂದರ್ಭ: ಡಾ. ಎ. ಸೂರ್ಯಪ್ರಕಾಶ್

ವಿಶ್ವ ಸಂವಾದ ಕೇಂದ್ರವು ಆಯೋಜಿಸಿದ್ದ ಮಾಧ್ಯಮ ಸಮಾವೇಶ
ವಿಶ್ವ ಸಂವಾದ ಕೇಂದ್ರವು ಆಯೋಜಿಸಿದ್ದ ಮಾಧ್ಯಮ ಸಮಾವೇಶ
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ ಸಂವಾದ ಕೇಂದ್ರವು ಆಯೋಜಿಸಿದ್ದ ಮಾಧ್ಯಮ ಸಮಾವೇಶ-2025
  • ಭಾರತೀಯ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ದಾಳಿ ನಡೆಸುವ ಮೆಕಾಲೆ ಶಿಕ್ಷಣ ಪದ್ಧತಿಯು ಮಾರಕವಾಗಿದೆ. ಆದ್ದರಿಂದ ಭಾರತೀಯತೆಯನ್ನು ಕಾಪಾಡುವ ಶಿಕ್ಷಣವು ಅಗತ್ಯವಾಗಿದೆ
  • ವಿವೇಕಾನಂದ, ರಾಮಾಯಣ, ಮಹಾಭಾರತ, ಭಗವದ್ಗೀತೆಯನ್ನು ನಮ್ಮ ಮಕ್ಕಳಿಗೆ ಕಲಿಸಿಕೊಡುವಂತಹ ಪಠ್ಯಕ್ರಮವನ್ನು ಮರು ರೂಪಿಸುವುದು ಅತ್ಯಗತ್ಯ
ಬೆಂಗಳೂರು: ಶಾಲಾ ಪಠ್ಯಕ್ರಮಗಳ ಮರು ರಚನೆ ಮತ್ತು ಭಾರತೀಯ ಮನಸ್ಸುಗಳನ್ನು ವಸಾಹತುಶಾಹಿಯಿಂದ ಮುಕ್ತಗೊಳಿಸಲು ಇದು ಸರಿಯಾದ ಸಮಯವಾಗಿದೆ ಎಂದು ಪ್ರಸಾರ ಭಾರತಿ ನಿವೃತ್ತ ಅಧ್ಯಕ್ಷ ಡಾ. ಎ. ಸೂರ್ಯಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ವಿಶ್ವ ಸಂವಾದ ಕೇಂದ್ರವು ಆಯೋಜಿಸಿದ್ದ ಮಾಧ್ಯಮ ಸಮಾವೇಶ-2025ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತೀಯ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳ ಮೇಲೆ ದಾಳಿ ನಡೆಸುವ ಮೆಕಾಲೆ ಶಿಕ್ಷಣ ಪದ್ಧತಿಯು ಮಾರಕವಾಗಿದೆ. ಆದ್ದರಿಂದ ಭಾರತೀಯತೆಯನ್ನು ಕಾಪಾಡುವ ಶಿಕ್ಷಣವು ಅಗತ್ಯವಾಗಿದೆ. ವಿವೇಕಾನಂದ, ರಾಮಾಯಣ, ಮಹಾಭಾರತ, ಭಗವದ್ಗೀತೆಯನ್ನು ನಮ್ಮ ಮಕ್ಕಳಿಗೆ ಕಲಿಸಿಕೊಡುವಂತಹ ಪಠ್ಯಕ್ರಮವನ್ನು ಮರು ರೂಪಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಕಾನ್ವೆಂಟ್‌ಗಳಲ್ಲಿ ಇಂಗ್ಲಿಷ್ ಶಿಕ್ಷಣದ ಮೂಲಕ ಮಕ್ಕಳ ಮನಸ್ಸನ್ನು ಪರಿವರ್ತನೆ ಮಾಡುವುದು, ಶಾಲೆಯ ವಾತಾವರಣ ಕೂಡ ಇಂಗ್ಲಿಷ್‌ಮಯವಾಗಿತ್ತು. ಯಾರೊಬ್ಬರು ಭಾರತೀಯ/ತಾಯಿ ಭಾಷೆಯನ್ನು ಶಾಲೆಗಳಲ್ಲಿ ಮಾತನಾಡುವಂತಿರಲಿಲ್ಲ. ಕ್ರಿಸ್‌ಮಸ್ ರಜೆ ನೀಡುವುದಕ್ಕಾಗಿ ಶೈಕ್ಷಣಿಕ ವರ್ಷವನ್ನು ಡಿಸೆಂಬರ್‌ಗೆ ಪೂರ್ಣಗೊಳಿಸುವುದು ಅವನ ಉದ್ದೇಶವಾಗಿತ್ತು. ರಾಜ್ಯದ ಕೃಷ್ಣದೇವರಾಯ, ರಾಣಿ ಚೆನ್ನಮ್ಮ ಅವರಂತಹ ಇತಿಹಾಸವನ್ನು ತಿಳಿಸದೆ ರೋಮನ್ ಇತಿಹಾಸವನ್ನು ಹೇಳಿಕೊಡಲಾಗುತ್ತಿತ್ತು ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ದಿನದ ಅಂಗವಾಗಿ 1949ರ ನ.25ರಂದು ಮಾಡಿದ ಭಾಷಣದಲ್ಲಿ ಆಧುನಿಕ ಶಿಕ್ಷಣ ಪದ್ಧತಿಯು ಹೇಗಿರಬೇಕೆಂದು ಬಹಳ ವಿಸ್ತೃತವಾಗಿ ಹೇಳಿದ್ದಾರೆ. ಸಮಾನತೆ, ಭ್ರಾತೃತ್ವ, ಸಾಮರಸ್ಯ, ಜಾತ್ಯತೀತತೆ, ಧಾರ್ಮಿಕ ಶಿಕ್ಷಣ ಮತ್ತು ರಾಜ್ಯದ ವಿಚಾರಗಳನ್ನು ತಿಳಿಸಿದ್ದಾರೆ. ಅದನ್ನು ಪಾಲಿಸುವ ಅಗತ್ಯವಿದೆ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿನ ಹಲವು ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಆದರೆ, ಹಲವರು ಮತಕ್ಕಾಗಿ ಅದರ ವಿರುದ್ಧವಾಗಿ ಹೋರಾಟ ಮಾಡುವವರೂ ಇದ್ದಾರೆ ಎಂದು ಟೀಕಿಸಿದರು.
ದೆಹಲಿಯ ಆರ್ಗನೈಜರ್ ಸಂಪಾದಕ ಪ್ರುಲ್ಲಾ ಕೇಟ್ಕರ್ ಮಾತನಾಡಿ, ಟಿವಿ, ಡಿಜಿಟಲ್ ಪೋರ್ಟಲ್, ವಾರಪತ್ರಿಕೆಗಳಿಗಿಂತ ದಿನಪತ್ರಿಕೆಗಳು ಸಾಕಷ್ಟು ವಿಶ್ವಾಸಾರ್ಹವಾಗಿವೆ. ಮುದ್ರಣ ಮಾಧ್ಯಮಗಳು ಸಾಕಷ್ಟು ಪರಿಶೀಲನೆ ಮಾಡಿ ಸುದ್ದಿಗಳನ್ನು ಪ್ರಕಟಿಸುತ್ತವೆ. ದಾಖಲೆಗಳನ್ನಾಗಿ ಪರಿಗಣಿಸುವಾಗ ಸಾಮಾನ್ಯವಾಗಿ ದಿನಪತ್ರಿಕೆಗಳೇ ಮುಖ್ಯ ಪಾತ್ರವಹಿಸಲಿವೆ ಎಂದರು.
ಪತ್ರಿಕೋದ್ಯಮ ತರಗತಿಗಳಲ್ಲಿ ಯಾವುದು ಸುದ್ದಿ, ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಸುದ್ದಿಯ ಉದ್ದೇಶವೇನು ಎಂಬುದನ್ನು ತಿಳಿಸುವ ಜತೆಗೆ ಸುದ್ದಿ ಪ್ರಕಟಿಸುವ ನಂತರದ ಪರಿಣಾಮಗಳನ್ನು ಸಹ ತಿಳಿಸಿಕೊಡುವ ಅಗತ್ಯವಿದೆ ಎಂದು ಹೇಳಿದರು.
ರಿಪಬ್ಲಿಕ್ ಕನ್ನಡ ಸುದ್ದಿ ವಾಹಿನಿ ಸಹಾಯಕ ಸುದ್ದಿ ಸಂಪಾದಕಿ ಶ್ರೀಲಕ್ಷ್ಮೀ ಅಭಿಜಿತ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇಡೀ ದಿನ ನಡೆದ ಸಂವಾದದಲ್ಲಿ ಹಲವು ಹಿರಿಯ ಪತ್ರಕರ್ತರು, ದೇಶದ ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಅಂಕಣಕಾರರು ಭಾಗವಹಿಸಿ ತಮ್ಮದೇ ದೃಷ್ಟಿಕೋನದಲ್ಲಿ ಮಾಧ್ಯಮಗಳ ಸ್ಥಿತಿಗತಿ ಮತ್ತು ಸೈದ್ಧಾಂತಿಕ ವಿಚಾರಗಳನ್ನು ಮಂಡಿಸಿದರು.
"

ನೆರೆಯ ಬಾಂಗ್ಲಾದೇಶ, ನೇಪಾಳದಲ್ಲಿ ಸಾಮಾಜಿಕ ತಾಣಗಳ ಅತಿಯಾದ ಬಳಕೆಯಿಂದ ಏನೆಲ್ಲ ಅಪಾಯಗಳು ತಂದೊಡ್ಡಿವೆ ಎಂಬುದನ್ನು ನೋಡಿದ್ದೇವೆ. ಭಾರತದಲ್ಲಿಯೂ ಅವುಗಳಿಗೆ ಕಡಿವಾಣ ಹಾಕದಿದ್ದರೆ, ಮುಂದೊಂದು ದಿನ ಅಂತಹ ಅಪಾಯಗಳು ಎದುರಾಗುವುದು ಖಂಡಿತ. ಈ ವಿಚಾರದಲ್ಲಿ ಯುವ ಜನರನ್ನು ಜಾಗೃತಿಗೊಳಿಸುವುದು ಮತ್ತು ಸಾಮಾಜಿಕ ತಾಣಗಳು ಹರಡುವ ಸುಳ್ಳುಗಳನ್ನು ಪತ್ತೆ ಹಚ್ಚಿ ಮುಖ್ಯವಾಹಿನಿ ಮಾಧ್ಯಮಗಳು ಸತ್ಯವನ್ನು ಹೇಳುವ ಪ್ರಯತ್ನ ಮಾಡಬೇಕಿದೆ.

"

ಸಾಮಾಜಿಕ ತಾಣಗಳ ಜತೆಗೆ ಕೃತಕ ಬುದ್ಧಿಮತ್ತೆ (ಎಐ)ನಿಂದ ಹೊರ ಬರುತ್ತಿರುವ ಚಿತ್ರ/ವೀಡಿಯೋಗಳ ಸತ್ಯಾಸತ್ಯತೆ ಪತ್ತೆಹಚ್ಚುವುದು ಸವಾಲಿನ ಕೆಲಸವಾಗಿದೆ. ಹಾಗೆಯೇ ದೇಶದ ಅತಿದೊಡ್ಡ ಹಗರಣಗಳಾದ ಬೋಪೋರ್ಸ್, ಅಕ್ರಮ ಗಣಿಗಾರಿಕೆಗಳನ್ನು ಬಯಲಿಗೆಳೆದದ್ದು ತನಿಖಾ ಪತ್ರಿಕೋದ್ಯಮ. ಅಂತಹ ತನಿಖಾ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದನೀಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net