ಬೈಲಹೊಂಗಲ: ಸಮೀಪದ ಗೊಂತಮಾರ ಗ್ರಾಮಕ್ಕೆ ತೆರಳುವ ರಸ್ತೆ ದುಸ್ಥಿತಿಗೆ ತಲುಪಿದ್ದು, ಮಾರ್ಗ ಮಧ್ಯದ ಹಳ್ಳದ ಸೇತುವೆ ಮೇಲೆ ನೀರು ಸಂಗ್ರಹಣೆಗೊಂಡು ಪ್ರಯಾಣಿಕರಿಗೆ ತೊಂದರೆಯಾಗಿದೆ. ಇಂಚಲದಿಂದ ಗೊಂತಮಾರ ಮೂಲಕ ಚಚಡಿ ಬಳಿ ರಾಜ್ಯ ಹೆದ್ದಾರಿಯವರೆಗೆ ಸುಮಾರು 2 ಕಿ.ಮೀ. ರಸ್ತೆ ಸಂಚಾರ ಅಯೋಮಯವಾಗಿದೆ. ರಸ್ತೆಯುದ್ದಕ್ಕೂ ತಗ್ಗು&ದಿನ್ನೆ ನಿರ್ಮಾಣವಾಗಿದ್ದು, ಮಳೆಗಾಲ ಆರಂಭಗೊಂಡಿದ್ದರಿಂದ ಸಂಚಾರಕ್ಕೆ ಮಾರಕವಾಗಿದೆ. ರಸ್ತೆಯಲ್ಲೆಡೆ ನೀರು ನಿಂತು ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆಯತ್ತ ಗಮನಹರಿಸಿ ರಸ್ತೆ ದುರಸ್ತಿಗೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.