ಶ್ರೀ ದತ್ತ ಕ್ಷೇತ್ರದಲ್ಲಿ ವೈಭವದ ಗುರುಪೂರ್ಣಿಮೆ

ಗುರುಪೂರ್ಣಿಮೆ ನಿಮಿತ್ತ ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ನಿರ್ಗುಣ ಮಠದಲ್ಲಿ ಶ್ರೀ ಗುರು ದತ್ತಾತ್ರೇಯ ಮಹಾರಾಜರ ಸುವರ್ಣ ಪಾದುಕೆಗಳಿಗೆ ಅರ್ಚಕರು ಬುಧವಾರ ವ್ಯಾಸ ಪೂಜೆ ಸಲ್ಲಿಸಿದರು.
ಗುರುಪೂರ್ಣಿಮೆ ನಿಮಿತ್ತ ಅಫಜಲಪುರ ತಾಲೂಕಿನ ದೇವಲಗಾಣಗಾಪುರದ ನಿರ್ಗುಣ ಮಠದಲ್ಲಿ ಶ್ರೀ ಗುರು ದತ್ತಾತ್ರೇಯ ಮಹಾರಾಜರ ಸುವರ್ಣ ಪಾದುಕೆಗಳಿಗೆ ಅರ್ಚಕರು ಬುಧವಾರ ವ್ಯಾಸ ಪೂಜೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಕಡಾರತಿಯೊಂದಿಗೆ ಪೂಜಾ ಕೈಂಕರ್ಯ
  • ಗುರುಗಳ ಚಾತುರ್ಮಾಸ್ಯ ಅನುಷ್ಠಾನ ಶುರು
ಅಫಜಲಪುರ: ಭಗವಂತ ಏಕಕಾಲಕ್ಕೆ ತ್ರಿಮೂರ್ತಿ ರೂಪದಲ್ಲಿ ದರ್ಶನ ಕರುಣಿಸುವ ದೇವಲಗಾಣಗಾಪುರದ ಶ್ರೀ ದತ್ತಾತ್ರೇಯ ಮಹಾರಾಜರ ನಿರ್ಗುಣ ಮಠದಲ್ಲಿ ಬುಧವಾರ ಶ್ರದ್ಧಾ ಭಕ್ತಿಯಿಂದ ಗುರುಪೂರ್ಣಿಮೆ ಜರುಗಿತು.
ಬೆಳಗ್ಗಿನ ಜಾವ 3.05ಕ್ಕೆ ಮುಖ್ಯ ಅರ್ಚಕರಿಂದ ದತ್ತಾತ್ರೇಯ ಮಹಾರಾಜರಿಗೆ ಕಾಕಡಾರತಿಯೊಂದಿಗೆ ಪೂಜಾ ಕೈಂಕರ್ಯಗಳು ಶುರುವಾಯಿತು. ತ್ರಿಮೂರ್ತಿ ಸ್ವರೂಪ ದತ್ತಾತ್ರೇಯ ಮಹಾರಾಜರ ಮೂರ್ತಿಯನ್ನು ಪುಷ್ಪಗಳಿಂದ ಅಲಂಕರಿಸಿ, ನಿರ್ಗುಣ ಪಾದುಕೆಗಳಿಗೆ ಕೇಸರ, ಕಸ್ತೂರಿ, ಸುಗಂಧ ದ್ರವ್ಯ ಲೇಪಿಸಲಾಯಿತು. ಗುರುಗಳ ಸ್ಫಟಿಕ ಲಿಂಗಕ್ಕೆ ಕ್ಷೀರಾಭಿಷೇಕ, ಅಷ್ಟೋತ್ತರ, ಸಹಸ್ರನಾಮ, ಮಹಾ ಮಂಗಳಾರತಿ ಮೂಲಕ ಭಕ್ತರಿಗೆ ದರ್ಶನಭಾಗ್ಯ ಕರುಣಿಸಲಾಯಿತು.
9ಕ್ಕೆ ಮಠದ ಪ್ರಾಂಗಣದಲ್ಲಿ ಮಹಾರಾಜರ ಚಾತುಮಾರ್ಸ್ಯ ಅಂಗವಾಗಿ ಫಲ&ಪುಷ್ಪ, ತಳಿರು ತೋರಣಗಳಿಂದ ಅಲಂಕೃತ ಚಪ್ಪರದಲ್ಲಿ ಪೂರ್ಣಕುಂಭವನ್ನಿರಿಸಿ ಮಂತ್ರಾಕ್ಷತೆ ಸಮರ್ಪಿಸಿ, ಮಹಾರಾಜರ ಸುವರ್ಣ ಪಾದುಕೆ, ದಂಡ ಮತ್ತು ಕಮಂಡಲಗಳಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ತುಳಸಿ, ಬಿಲ್ವಪತ್ರೆ, ರುದ್ರಾಕ್ಷಿ ಹಾಗೂ ವಸಾಲಂಕೃತ ಪೀಠದಲ್ಲಿ ಸುವರ್ಣ ಪಾದುಕೆಗಳನ್ನಿರಿಸಿ ಮೂರು ತಾಸಿಗೂ ಅಧಿಕ ಅರ್ಚಕ ವೃಂದದಿಂದ ಮಂತ್ರಘೋಷಗಳ ಮೂಲಕ ಆರಾಧಿಸಿ ಲಘು ನೈವೇದ್ಯ ಸಮರ್ಪಿಸಿ ವ್ಯಾಸ ಪೂಜೆ ಜರುಗಿತು. ಈ ಮೂಲಕ ಭಕ್ತಕೋಟಿ ಕಲ್ಯಾಣಕ್ಕಾಗಿ ಗುರುಗಳ ಚಾತುಮಾರ್ಸ್ಯ ಅನುಷ್ಠಾನ ಪ್ರಾರಂಭವಾಯಿತು.
ಶ್ರೀ ಗುರು ದತ್ತ ಮಹಾರಾಜ ಕೀ ಜೈ... ಶ್ರೀಪಾದ ವಲ್ಲಭಾಯ ನಮೋ ನಮ@, ದಿಗಂಬರ ದಿಗಂಬರ ಶ್ರೀಪಾದ ವಲ್ಲಭ ದಿಗಂಬರ ಸೇರಿ ಹಲವು ಘೋಷಣೆಗಳು ಮೊಳಗಿದವು. ಎಂದಿನಂತೆ ಮಹಾ ನೈವೇದ್ಯ ಸಮರ್ಪಿಸಲಾಯಿತು. ರಾತ್ರಿ 8ಕ್ಕೆ ದತ್ತ ಮಹಾರಾಜರ ಉತ್ಸವ ಮೂರ್ತಿಯನ್ನು ಫಲ-ಪುಷ್ಪ ಅಲಂಕೃತ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಪಲ್ಲಕ್ಕಿ ಸೇವೆ ನಡೆಯಿತು.
ನಾಗೇಶಭಟ್ಟ ಪೂಜಾರಿ, ದತ್ತಾತ್ರೇಯ ಪೂಜಾರಿ, ಮನೋಹರ ಪೂಜಾರಿ, ಚಂದ್ರವಿಲಾಸ ಪೂಜಾರಿ, ಕಲ್ಲಮಭಟ್ಟ ಪೂಜಾರಿ, ಸಾಲಕಾರಿ ಕಾರ್ಯದರ್ಶಿ ಪ್ರಿಯಾಂಕ್​ ಪೂಜಾರಿ, ಉದಯ ಪೂಜಾರಿ, ಕರುಣಾಕರ ಪೂಜಾರಿ, ಪ್ರಖ್ಯಾತ ಪೂಜಾರಿ, ಪ್ರಫುಲ್​ ಪೂಜಾರಿ, ನರಹರಿ ಪೂಜಾರಿ, ದಿಗಂಬರ ಪೂಜಾರಿ, ಪ್ರವಿಣ ಪೂಜಾರಿ, ಪ್ರಸಾದ ಪೂಜಾರಿ, ಅವಧೂತ ಪೂಜಾರಿ, ಗುಂಡುಭಟ್ಟ ಪೂಜಾರಿ, ಕೌಸ್ತುಭ ಪೂಜಾರಿ, ದೇವು ಪೂಜಾರಿ, ಭರತ ಪೂಜಾರಿ, ರೋಹಿತ ಪೂಜಾರಿ, ಕಿರಣ ಪೂಜಾರಿ, ಶ್ರೀಧರ ಪೂಜಾರಿ, ಅಭಯ ಪೂಜಾರಿ, ಚಂದನ ಪೂಜಾರಿ, ಶರತ್​ ಪೂಜಾರಿ, ಆಶೀರ್ವಾದ ಪೂಜಾರಿ, ಅರ್ಲಕ್​ ಪೂಜಾರಿ, ಸರ್ವೇಶ ಪೂಜಾರಿ, ಚೇತನ ಪೂಜಾರಿ, ಸ್ವರೂಪ ಪೂಜಾರಿ, ಪ್ರತಿಕ್​ ಪೂಜಾರಿ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ, ದತ್ತು ನಿಂಬರಗಿ ಇತರರಿದ್ದರು.
ವಿಐಪಿ ಮಾರ್ಗ ಬಂದ್​
ಹೊಸದಾಗಿ ದೇವಸ್ಥಾನ ಸಮಿತಿಗೆ ನೋಡಲ್​ ಅಧಿಕಾರಿಯಾಗಿ ನೇಮಕವಾಗಿರುವ ಶಿಖರ ಮೋಘಾ ವಿಐಪಿ ಮಾರ್ಗ ಬಂದ್​ ಮಾಡಿದ್ದರಿಂದ ಗಣ್ಯರ ದರ್ಶನಕ್ಕೆ ತೊಂದರೆಯಾಯಿತು. ಜತೆಗೆ ಹೆಚ್ಚಿನ ಜನರು ಹೊರಗಡೆ ಹೋಗುವ ಗೇಟ್​ನಿಂದ ಒಳಗಡೆ ಬಂದಿದ್ದರಿಂದ ನೂಕುನುಗ್ಗಲು ಉಂಟಾಗಿ ಮಹಿಳೆಯರು, ಮಕ್ಕಳು ಹೈರಾಣ ಆಗಬೇಕಾಯಿತು. ಸರ್ವದರ್ಶನದ ಸರತಿ ಸಾಲಿನಲ್ಲಿ ನಿಂತವರು ಹೆಚ್ಚಿನ ನಿಲ್ಲುವಂತಾಯಿತು. ಪೋಲಿಸರು ಭಕ್ತರಿಂದ ಹಣ ಪಡೆದು ಎಕ್ಸಿಟ್​ ಗೇಟ್​ನಿಂದ ಒಳಗಡೆ ಬಿಡುತ್ತಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.
ಅರ್ಚಕರ ಆಕ್ರೋಶ
ದೇವಸ್ಥಾನದ ಗರ್ಭಗುಡಿ ಪ್ರವೇಶಕ್ಕೆ ಹೆಚ್ಚಿನ ಪಾವಿತ್ರ್ಯವಿದ್ದು, ಪೂಜೆಗೆ ನೀರು ಮತ್ತು ಮಹಾ ನೈವೇದ್ಯ ತರಲು ಪೂರ್ವಜರಿಂದ ಹಿಂಬದಿಯ ಗೇಟ್​ ಬಳಸುತ್ತಿದ್ದೆವು. ಆದರೆ ಹೊಸದಾಗಿ ಬಂದ ನೋಡಲ್​ ಅಧಿಕಾರಿ ಏಕಾಏಕಿ ಬಂದ್​ ಮಾಡಿದ್ದರಿಂದ ಅನನುಕೂಲ ಜತೆಗೆ ಉದ್ದೇಶಪೂರ್ವಕವಾಗಿ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವಂಥ ಹುನ್ನಾರ ನಡೆಯುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ. ಗೇಟ್​ ಬಂದ್​ ಮಾಡಬೇಕೆಂದರೆ ಸರ್ಕಾರ ಸಿಬ್ಬಂದಿ ನೇಮಿಸಿ ಪೂಜಾ ಸಮಯದಲ್ಲಿ ತೆರೆದು ನಂತರ ಬೇಕಿದ್ದರೆ ಬಂದ್​ ಮಾಡಲಿ ಎಂದು ಅರ್ಚಕರು ಕಿಡಿಕಾರಿದ್ದಾರೆ.
"

ಭಕ್ತ ಕುಲಕೊಟಿಗೆ ಶ್ರೀ ದತ್ತ ಮಹಾರಾಜರೇ ಮೊದಲ ಗುರುಗಳಾಗಿ ತ್ರಿಲೋಕಕ್ಕೆ ತ್ರಿಮೂರ್ತಿ ರೂಪದಲ್ಲಿ ಮಾರ್ಗದರ್ಶನ ಮಾಡಿರುವ ಗುರುಗಳ ಆರಾಧನೆಗೆ ಗುರುಪೂರ್ಣಿಮೆ ವಿಶೇಷ ದಿನ. ಗುರುಗಳು ಮಠಕ್ಕೆ ಶರಣಾಗಿ ಬರುವ ಭಕ್ತರ ನಿಷ್ಕಲ್ಮಶ ಭಕ್ತಿಯನ್ನು ಸ್ವೀಕರಿಸಿ ಉದ್ಧರಿಸುತ್ತಿದ್ದಾರೆ.

— > ಪ್ರಿಯಾಂಕ್​ ಪೂಜಾರಿ ಸಾಲಕಾರಿ ಕಾರ್ಯದರ್ಶಿ, ಶ್ರೀ ದತ್ತಾತ್ರೇಯ ನಿರ್ಗುಣ ಮಠ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net