ಕೆಂಭಾವಿ: ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಎಲ್ಲ ಬಿಎಲ್ಒಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿ ರಾಷ್ಟ್ರೀಯ ಕೆಲಸಕ್ಕೆ ಮನ್ನಣೆ ನೀಡಬೇಕು ಎಂದು ಕಂದಾಯ ಇಲಾಖೆ ಎಸ್ಐಆರ್ (ಸ್ಪೆಷಲ್ ಇಂಟೆನ್ಸಿವ್ ರಿವಿಜನ್) ನೋಡಲ್ ಅಧಿಕಾರಿ ಸಂಗಮೇಶ ಹೇಳಿದರು.
ಪಟ್ಟಣದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣಾ-2026ರ ತರಬೇತಿ ಕಾರ್ಯಕ್ರಮದಲ್ಲಿ ಬಿಎಲ್ಒಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮತದಾರರ ಪಟ್ಟಿ ಶುದ್ಧಿಕರಿಸುವ ಪ್ರಕ್ರಿಯೆ ಇದಾಗಿದ್ದು ಭಾರತ ದೇಶದ ಪ್ರತಿಯೊಬ್ಬ 18 ವರ್ಷ ತುಂಬಿದ ಪ್ರಜೆ ಮತದಾನದಿಂದ ವಂಚಿತವಾಗಬಾರದು. ಈ ನಿಟ್ಟಿನಲ್ಲಿ ಮತದಾರರ ಚೀಟಿಯಲ್ಲಿ ಹಲವು ಲೋಪದೋಷ ಕಂಡು ಬಂದಿದ್ದರೆ ಅವುಗಳನ್ನು ಸರಿಪಡಿಸಿ ನಿಜವಾದ ಮತದಾರರ (ಭಾರತ ದೇಶದ ಪ್ರಜೆಯಾಗಿರಬೇಕು) ಪಟ್ಟಿಯನ್ನು ಪರಿಷ್ಕರಿಸುವಂತೆ ಸೂಚನೆ ನೀಡಿದರು.
ಭಾರತ ದೇಶದ ಯಾವುದೇ ನಾಗರಿಕ ಮತದಾನದಿಂದ ವಂಚಿತವಾಗಬಾರದು ಮತ್ತು ಭಾರತೀಯ ನಾಗರಿಕನಲ್ಲದ ಮತದಾರ ಈ ದೇಶದಲ್ಲಿ ಮತದಾನ ಮಾಡಬಾರದು ಎಂಬ ಮಹತ್ವದ ಎರಡು ವಿಧಾನಗಳಿಂದ ಈ ಎಸ್ಐಆರ್ ಕಾರ್ಯನಿರ್ವಹಿಸುತ್ತಿದೆ. ಜೂ.30ರಿಂದ ಈ ಮತದಾನ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭವಾಗಲಿದ್ದು ಎಲ್ಲ ಬಿಎಲ್ಒಗಳು ತಮಗೆ ನಿರ್ವಹಿಸಿದ ಕೆಲಸ ಅಚ್ಚುಕಟ್ಟಾಗಿ ಮನೆ ಮನೆಗೆ ತೆರಳಿ ಮತದಾರರ ಚೀಟಿ ಸರಿಪಡಿಸುವಂತೆ ಹೇಳಿದರು.
ಹಿರಿಯ ಪತ್ರಕರ್ತ ಸಂಜೀವರಾವ ಕುಲಕರ್ಣಿ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಒಂದು ಮಹತ್ವ ಜವಾಬ್ದಾರಿಯಾಗಿದ್ದು ವಲಯದ 87 ಮತಗಟ್ಟೆಗಳ ಬಿಎಲ್ಒಗಳ ತರಬೇತಿ ಇಂದು ನಡೆಯುತ್ತಿದೆ. ಈ ತರಬೇತಿಯಲ್ಲಿ ಹಲವು ಬಿಎಲ್ಒಗಳು ಗೈರಾಗಿರುವುದು ಕಂಡು ಬಂದಿದ್ದು ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಎಲ್ಲ ಬಿಎಲ್ಒಗಳು ಸರ್ಕಾರದ ಕಾರ್ಯದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಕಂದಾಯ ನಿರೀಕ್ಷಕ ರಾಜೇಸಾಬ್ ಕಂದಗಲ್, ಗ್ರಾಮ ಅಢಳಿತಾಧಿಕಾರಿ ಬ್ರಹ್ಮದೇವನ ಮಡು, ಪುರಸಭೆ ಸಿಬ್ಬಂದಿ ಸಿದ್ರಾಮಯ್ಯ ಇಂಡಿ, ಬಸವರಾಜ ಬೋರಗಿ, ಕಾಶೀನಾಥ, ಸಿದ್ಧನಗೌಡ, ಶಿವು ಚೌಹ್ಹಾಣ್, ವೀರೇಶ ಭಜಂತ್ರಿ, ಕುಮಾರ ಮೋಪಗಾರ ಇದ್ದರು.
"
ವಲಯದಲ್ಲಿ 87 ಮತಗಟ್ಟೆಗಳಿದ್ದು ಈ ಮತಗಟ್ಟೆಗಳ ಜವಾಬ್ದಾರಿ ಬಿಎಲ್ಒಗಳ ಮೇಲಿದೆ. ಮಂಗಳವಾರ ನಡೆದ ವಿಶೇಷ ತರಬೇತಿಗೆ ಗೈರಾದ ಕೆಂಭಾವಿ, ಮಾಲಗತ್ತಿ, ಯಾಳಗಿ ಸೇರಿ ಹಲವು ಬಿಎಲ್ಒಗಳಿಗೆ ಕಾರಣ ಕೇಳಿ ನೋಟೀಸ್ ನೀಡಲಾಗುವುದು.