ಚಿಂಚೋಳಿ: ತಾಲೂಕು ಪಂಚಾಯಿತಿ ಕಚೇರಿಗೆ ಪ್ರಭಾರ ಬದಲು ಕಾಯಂ ಅಧಿಕಾರಿ ನಿಯೋಜಿಸುವಂತೆ ಕಾಂಗ್ರೆಸ್ನ ತಾಲೂಕು ವಕ್ತಾರ ಶರಣಪ್ಪ ಪಾಟೀಲ್ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿಪತ್ರ ಸಲ್ಲಿಸಿರುವ ಅವರು, ಜಿಲ್ಲೆಯಲ್ಲಿ ಚಿಂಚೋಳಿ ಅತಿ ದೊಡ್ಡ ತಾಲೂಕು ಮತ್ತು ಗ್ರಾಮೀಣ ಪ್ರದೇಶವಾಗಿದೆ. ಹೀಗಿದ್ದರೂ ತಾಲೂಕು ಮಟ್ಟದ ಅತಿ ಮುಖ್ಯ ತಾಪಂ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ 15 ವರ್ಷಗಳಿಂದ ಸರ್ಕಾರ ಕಾಯಂ ಅಧಿಕಾರಿ ಕೊಟ್ಟಿಲ್ಲ. ಇನ್ನು ಬೇರೆ ಇಲಾಖೆ ಹುದ್ದೆಗೆ ಅರ್ಹರಲ್ಲದ ಅಧಿಕಾರಿಗಳನ್ನು ನಿಯೋಜಿಸಿದ್ದು ವಿಪರ್ಯಾಸ ಎಂದು ಗಮನಕ್ಕೆ ತಂದಿದ್ದಾರೆ. ಸಹಾಯಕ ಆಯುಕ್ತರ ಹುದ್ದೆಗೆ ಸರಿಸಮಾನವಾದ ತಾಪಂ ಇಒ ಹುದ್ದೆಯಲ್ಲಿ ಅನರ್ಹರೇ ಕಾರುಬಾರು ಮಾಡುತ್ತಿರುವುದು ಸರಿಯಲ್ಲ. ಮೀಸಲು ೇತ್ರವಾದ ಚಿಂಚೋಳಿಯಲ್ಲಿ ಹಿಂದೆ ಕಾಂಗ್ರೆಸ್, ನಂತರ ಬಿಜೆಪಿ ಶಾಸಕ ಹೀಗೆ ಏನೆಲ್ಲ ಬದಲಾವಣೆ ಆದರೂ ಇಒ ಹುದ್ದೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ. ಕೂಡಲೇ ಪ್ರಭಾರಿಗಳ ಹಾವಳಿಯಿಂದ ತಾಪಂಗೆ ಮುಕ್ತಿ ನೀಡಬೇಕು ಎಂದು ಕೋರಿದ್ದಾರೆ.