

ಪ್ರಮುಖ ಮುಖ್ಯಾಂಶಗಳು
ಆಳಂದ: ಮಟಕಿ ತಾಂಡಾದಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ ಯುವಕನೋರ್ವ ಮೃತಪಟ್ಟಿದ್ದು, ಸಾವಿನ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಕಲಬುರಗಿಯ ಜಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿತೇಶ ಶಿವಲಾಲ್ ಬಿಳಿರಾಮ ರಾಠೋಡ್ (17) ಮೃತ. ಕೌಟುಂಬಿಕ ಕಲಹದಿಂದಾಗಿ ಆ.11ರಂದು ಶಿವಲಾಲ್ ರಾಠೋಡ್ (49) ಎಂಬಾತ ಟೊಂಕಕ್ಕೆ ಜಿಲೆಟಿನ್ ಕಟ್ಟಿಕೊಂಡು ಸ್ಫೋಟಿಸಿಕೊಂಡಿದ್ದ. ಸ್ಫೋಟದ ಭೀಕರತೆಗೆ ಶಿವಲಾಲ್, ಪುತ್ರಿ ಮೀರಾಬಾಯಿ ರಾಠೋಡ್ (15) ಸ್ಥಳದಲ್ಲೇ ಮೃತರಾಗಿದ್ದರು. ತೀವ್ರ ಗಾಯಗೊಂಡಿದ್ದ ಪುತ್ರ ವಿತೇಶ ರಾಠೋಡ್, ಪತ್ನಿ ಸವಿತಾ ರಾಠೋಡ್, ಸವಿತಾ ಸಂಬಂಧಿಕರಾದ ಸುರೇಖಾ ಚವ್ಹಾಣ್, ಪುತ್ರ ವಿವೇಕ ಚವ್ಹಾಣ್ ಗಾಯಗೊಂಡಿದ್ದರು. ಎಲ್ಲರನ್ನು ಜಿಮ್ಸ್ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ವಿತೇಶ ರಾಠೋಡ್ ಅಸುನೀಗಿದ್ದಾನೆ. ಸವಿತಾ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.