ಜಿಡಿಎ ನಿವೇಶನ ಹಂಚಿಕೆ ಪಾರದರ್ಶಕ

ಗುಲ್ಬರ್ಗ ವಿಶ್ವವಿದ್ಯಾಲಯದ ಡಾ.ಅಂಬೇಡ್ಕರ್​ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ಮತ್ತಿಮಡು ಅವರು ಲಾಟರಿ ಮೂಲಕ ನಿವೇಶನಗಳ ಹಂಚಿಕೆಗೆ ಚಾಲನೆ ನೀಡಿದರು. ಮೇಯರ್​ ವರ್ಷಾ ಜಾನೆ, ಡಿಸಿ ಇಕ್ರಮ್​ ಶರೀಫ್​, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಕುಡಾ ಅಧ್ಯಕ್ಷ ಮಜರ್​ ಆಲಂಖಾನ್​ ಇತರರಿದ್ದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಡಾ.ಅಂಬೇಡ್ಕರ್​ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ಮತ್ತಿಮಡು ಅವರು ಲಾಟರಿ ಮೂಲಕ ನಿವೇಶನಗಳ ಹಂಚಿಕೆಗೆ ಚಾಲನೆ ನೀಡಿದರು. ಮೇಯರ್​ ವರ್ಷಾ ಜಾನೆ, ಡಿಸಿ ಇಕ್ರಮ್​ ಶರೀಫ್​, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಕುಡಾ ಅಧ್ಯಕ್ಷ ಮಜರ್​ ಆಲಂಖಾನ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಹೇಳಿಕೆ
  • 50-50 ರೈತರ ಸಹಭಾಗಿತ್ವದ ವಸತಿ ಯೋಜನೆ
ಕಲಬುರಗಿ: ನಗರಾಭಿವೃದ್ಧಿ ಪ್ರಾಧಿಕಾರದ (ಜಿಡಿಎ)ದಿಂದ ಡಾ.ಖಮರ್​-ಉಲ್​-ಇಸ್ಲಾಂ ಹಾಗರಗಾ 50:50 ರೈತರ ಸಹಭಾಗಿತ್ವದ ವಸತಿ ಯೋಜನೆಯಡಿ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡುತ್ತಿರುವುದು ಶ್ಲಾನೀಯ ಎಂದು ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಡಾ.ಬಿ.ಆರ್​.ಅಂಬೇಡ್ಕರ್​ ಸಭಾಂಗಣದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬುಧವಾರ ಹಮ್ಮಿಕೊಂಡಿದ್ದ ಡಾ.ಖಮರ್​-ಉಲ್​-ಇಸ್ಲಾಂ ಹಾಗರಗಾ 50-50 ರೈತರ ಸಹಭಾಗಿತ್ವದ ವಸತಿ ಯೋಜನೆ, ಲಾಟರಿ ಮೂಲಕ ನಿವೇಶನಗಳ ಹಂಚಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ನಿವೇಶನ ಹಂಚಿಕೆ ವಿಚಾರದಲ್ಲಿ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದವು. ಆದರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್​ ಆಲಂ ಖಾನ್​ ನೇತೃತ್ವದಲ್ಲಿ ಎಲ್ಲ ಅರ್ಹರಿಗೂ ಲಾಟರಿ ಮೂಲಕ ಪಾರದರ್ಶಕವಾಗಿ ನಿವೇಶನ ಕಲ್ಪಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್​ ಆಲಂ ಖಾನ್​ ಮಾತನಾಡಿ, ಹಾಗರಗಾ 50:50 ಯೋಜನೆ ಮಾಜಿ ಸಚಿವ ಡಾ.ಖಮರ್​-ಉಲ್​-ಇಸ್ಲಾಂ ಅವರ ಕನಸಿನ ಯೋಜನೆಯಾಗಿತ್ತು. ಸಚಿವ ಪ್ರಿಯಾಂಕ್​ ಖರ್ಗೆ, ಶಾಸಕಿ ಕನೀಜ್​ ಫಾತಿಮಾ, ಅಲ್ಲಮಪ್ರಭು ಪಾಟೀಲ್​ ಅವರ ಶ್ರಮದಿಂದಾಗಿ 2023ರ ನವೆಂಬರ್​ನಲ್ಲಿ ಯೋಜನೆಗೆ ಕ್ಯಾಬಿನೆಟ್​ ಅನುಮೋದನೆ ದೊರೆತಿದೆ. ಸಲ್ಲಿಕೆಯಾಗಿದ್ದ 6,253 ಅರ್ಜಿ ಪರಿಶೀಲಿಸಿ, 117 ಎಕರೆ 5 ಗುಂಟೆ ವಿಸ್ತೀರ್ಣದಲ್ಲಿ ಲಭ್ಯವಿರುವ 769 ಸೈಟ್​ಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ಪಾರದರ್ಶಕವಾಗಿ ಲಾಟರಿ ಮೂಲಕ ಹಂಚಲಾಗುತ್ತಿದೆ ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಸುಬ್ಬರಾವ್​ ಪ್ರಾಸ್ತಾವಿಕ ಮಾತನಾಡಿ, ನಗರದಲ್ಲಿ ಅನಧಿಕೃತ ಬಡಾವಣೆಗಳು ನಿರ್ಮಾಣವಾಗಬಾರದು. ಅಧಿಕೃತ ಬಡಾವಣೆಗಳೆ ಬರಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ 50:50 ಯೋಜನೆ ಜಾರಿಗೆ ತಂದಿದೆ. ಒಟ್ಟು 117 ಎಕರೆ 5 ಗುಂಟೆ ಜಮೀನಿನಲ್ಲಿ ಈ ಯೋಜನೆ ರೂಪಿಸಲಾಗಿದ್ದು, ಪ್ರಾಧಿಕಾರದ ವಶದಲ್ಲಿರುವ 769 ನಿವೇಶನಗಳನ್ನು ಸಾರ್ವಜನಿಕರಿಗೆ ಅತ್ಯಂತ ಪಾರದರ್ಶಕ ಹಾಗೂ ನ್ಯಾಯಯುತವಾಗಿ ಲಾಟರಿ ಮೂಲಕ ಹಂಚಿಕೆ ಮಾಡಲಾಗುತ್ತಿದೆ. ಸಾರ್ವಜನಿಕರು ಲಾಟರಿ ಪ್ರಕ್ರಿಯೆ ಮುಗಿದ ನಂತರ ಏನೇ ಸಮಸ್ಯೆ ಅಥವಾ ಸಂದೇಹಗಳಿದ್ದರೂ ಕಚೇರಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪಾಲಿಕೆ ಮೇಯರ್​ ವರ್ಷಾ ಜಾನೆ, ಎಸ್​ಪಿ ಅಡ್ಡೂರು ಶ್ರೀನಿವಾಸುಲು, ಪಾಲಿಕೆ ಆಯುಕ್ತ ಅವಿನಾಶ್​ ಶಿಂಧೆ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶೈಲೇಂದ್ರಸಿಂಗ್​, ಡಿಎಫ್​ಒ ಆಶಿಶ್​ ರೆಡ್ಡಿ, ಮಹಾನಗರ ಪಾಲಿಕೆ ಸದಸ್ಯರಾದ ಅಯಾಜ್​ ಖಾನ್​, ರಿಯಾಜ್​ ಅಹಮದ್​, ಖುಸ್ರೋ ಜಾಹಗೀರದಾರ್​, ಲಿಯಾಕತ್​, ಸಾಜಿದ್​ ಕಲ್ಯಾಣಿ, ಸಚಿನ್​ ಶಿರವಾಳ್​ ಇತರರಿದ್ದರು.
ಎಸ್​ಟಿ ಮೀಸಲು ವರ್ಗದಡಿ ಸಂಗೀತಾ ಶರಣಪ್ಪ ಮೇತ್ರೆ (ಅರ್ಜಿ ಸಂಖ್ಯೆ 260) ಅವರಿಗೆ ನಿವೇಶನ ಸಂಖ್ಯೆ 555, ಎಸ್​ಸಿ ವರ್ಗದಡಿ ಪ್ರೇಮಲತಾ ದತ್ತು (ಅರ್ಜಿ ಸಂಖ್ಯೆ 219) ಅವರಿಗೆ ನಿವೇಶನ ಸಂಖ್ಯೆ 551 ಲಭಿಸಿತು.
"

ನಿವೇಶನ ಹಂಚಿಕೆಯಲ್ಲಿ ಮಾಜಿ ಸೈನಿಕರು, ಬಡವರು ಹಾಗೂ ವಸತಿ ರಹಿತರಿಗೆ ಸರ್ಕಾರಿ ನಿಯಮದಂತೆ ಸಬ್ಸಿಡಿ ಮತ್ತು ಆದ್ಯತೆ ನೀಡಬೇಕು. ಹಾಗರಗಾ ಬಡಾವಣೆಗೆ ಅಗತ್ಯ ರಸ್ತೆ, ಕುಡಿವ ನೀರು ಸೇರಿ ಮೂಲಸೌಕರ್ಯ ಕಲ್ಪಿಸಲು ಈಗಾಗಲೇ ಟೆಂಡರ್​ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ.

— > ಬಸವರಾಜ ಮತ್ತಿಮಡು, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net