ಈಗಾಗಲೇ ಬೆಂಗಳೂರು ನಗರದಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಒಕ್ಕಲಿಗ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಮತ್ತೊಂದೆಡೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ, ಲಿಂಗಾಯಿತ ಸಮುದಾಯದಲ್ಲಿ ದೊಡ್ಡ ಮುಖಂಡರಾಗಿದ್ದು, ರಾಜ್ಯದಲ್ಲಿ ತನ್ನದೆ ಚಾಪು ಮೂಡಿಸಿ ಬೆಂಗಳೂರು ನಗರದಲ್ಲಿ ಮತ ಸೆಳೆಯುವಲ್ಲಿ ವರ್ಚಸ್ಸು ಹೊಂದಿದ್ದಾರೆ. ಇವರೊಂದಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ತನ್ನದೆ ಭಾಷಣ ಶೈಲಿಯಲ್ಲಿ ಯುವ ಸಮುದಾಯಕ್ಕೆ ಹತ್ತಿರ ಆಗಿದ್ದಾರೆ. ಇವರೊಂದಿಗೆ ಇದೀಗ ಕೇಂದ್ರ ಸಚಿವ ಸಂಪುಟ ಪುನಾರಚನೆ ವೇಳೆ ಹಿಂದುಳಿದ ವರ್ಗಕ್ಕೆ ಸೇರಿದ ಸಂಸದ ಪಿ.ಸಿ. ಮೋಹನ್ ಅವರಿಗೆ ಅವಕಾಶ ಕಲ್ಪಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರದಲ್ಲಿ ಬಿಜೆಪಿಯ ಕೇಂದ್ರ ನಾಯಕರು ರಣತಂತ್ರ ರೂಪಿಸುತ್ತಿದ್ದಾರೆ. ಈ ಮೂಲಕ ಎಲ್ಲ ಸಮುದಾಯದ ಮುಖಂಡರು ಮತ್ತು ನಾಯಕರಿಗೆ ಒಂದಿಲ್ಲೊಂದು ಹುದ್ದೆಗಳನ್ನು ಕೊಟ್ಟು ಅವರನ್ನು ಮುಂದಿಟ್ಟುಕೊಂಡು ಪಾಲಿಕೆ ಚುನಾವಣೆ ವೇಳೆ ಮತ ಸೆಳೆಯವ ಲೆಕ್ಕಾಚಾರ ಬಿಜೆಪಿ ಮಾಡಿದೆ.