ಈ ವರ್ಷದಿಂದ ಎಲ್‌ಕೆಜಿ, ಯುಕೆಜಿ, ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ

ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ
ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ
Published on

ಪ್ರಮುಖ ಮುಖ್ಯಾಂಶಗಳು

  • ಪೂರ್ವ ಪ್ರಾಥಮಿಕ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಬಾಲಚೇತನ ದ್ವಿಭಾಷಾ ಚಟುವಟಿಕೆ ಪುಸ್ತಕ,ಪಠ್ಯಪುಸ್ತಕ
  • ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ
  • 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನೀತಿ ಶಿಕ್ಷಣ ಪಠ್ಯಪುಸ್ತಕ ಮತ್ತು ಮರುಸಿಂಚನ ಚಟುವಟಿಕೆ ಪುಸ್ತಕಗಳನ್ನು ಸಹ ವಿತರಿಸುವಂತೆ ಆದೇಶ
ಬೆಂಗಳೂರು: ಪ್ರಸ್ತುತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಮತ್ತು 1ರಿಂದ ದ್ವಿತೀಯ ಪಿಯುಸಿವರೆಗಿನ ಮಕ್ಕಳಿಗೆ ದಿನಚರಿಯನ್ನು ವಿತರಣೆ ಮಾಡಲಾಗುತ್ತಿದೆ.
2026-27ನೇ ಶೈಕ್ಷಣಿಕ ಸಾಲಿನಿಂದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಪೂರ್ವ ಪ್ರಾಥಮಿಕ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಬಾಲಚೇತನ ದ್ವಿಭಾಷಾ ಚಟುವಟಿಕೆ ಪುಸ್ತಕ, ಪಠ್ಯಪುಸ್ತಕ ಹಾಗೂ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆದೇಶ ಹೊರಡಿಸಿದೆ.

ಮೌಲ್ಯಶಿಕ್ಷಣ ಪುಸ್ತಕ ವಿತರಣೆ:

ಶಾಲಾ ಮಕ್ಕಳಲ್ಲಿ ಮೌಲ್ಯಶಿಕ್ಷಣವನ್ನು ನೀಡುವ ಕುರಿತು ಈಗಾಗಲೇ ನಿರ್ಧರಿಸಲಾಗಿದೆ. ಈ ಸಂಬಂಧ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನೀತಿ ಶಿಕ್ಷಣ ಪಠ್ಯಪುಸ್ತಕ ಮತ್ತು ಮರುಸಿಂಚನ ಚಟುವಟಿಕೆ ಪುಸ್ತಕಗಳನ್ನು ಸಹ ವಿತರಿಸುವಂತೆ ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ.

ಎಸ್‌ಸಿಪಿ-ಟಿಎಸ್‌ಪಿ ಅನುದಾನ ಬಳಕೆ

2025-26ನೇ ಸಾಲಿನಲ್ಲಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆ ಅಡಿಯಲ್ಲಿ ಬಳಕೆಯಾಗದೆ ಇರುವ ಮೊತ್ತವನ್ನು ಅನುಮೋದಿತ ಕ್ರಿಯಾಯೋಜನೆ ಅನುಸಾರ ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

258 ಕೋಟಿ ರೂ. ಅನುದಾನ

ವಿದ್ಯಾವಿಕಾಸ ಯೋಜನೆ ಅಡಿಯಲ್ಲಿ ಪಠ್ಯಪುಸ್ತಕ, ದಿನಚರಿ, ಅಭ್ಯಾಸ ಪುಸ್ತಕಗಳನ್ನು ಮುದ್ರಣ ಮಾಡಿ ವಿತರಣೆ ಮಾಡುವುದಕ್ಕಾಗಿ ಒಟ್ಟು 258.41 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net