ಪತ್ರಿಕೋದ್ಯಮ ವಿಭಾಗದಲ್ಲಿ ಉತ್ಸವ

ಕಲಬುರಗಿ ಶರಣಬಸವ ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ಕಕ ಉತ್ಸವಕ್ಕೆ ಡಾ.ಸಂಗೀತಾ ಕಟ್ಟಿಮನಿ ಚಾಲನೆ ನೀಡಿದರು. ಟಿ.ವಿ.ಶಿವಾನಂದನ್​, ಡಾ.ಸುನಿತಾ ಇತರರಿದ್ದರು.
ಕಲಬುರಗಿ ಶರಣಬಸವ ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ಕಕ ಉತ್ಸವಕ್ಕೆ ಡಾ.ಸಂಗೀತಾ ಕಟ್ಟಿಮನಿ ಚಾಲನೆ ನೀಡಿದರು. ಟಿ.ವಿ.ಶಿವಾನಂದನ್​, ಡಾ.ಸುನಿತಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅರ್ಥಶಾಸ್ತ್ರಜ್ಞೆ ಸಂಗೀತಾ ಕಟ್ಟಿಮನಿ ಆತಂಕ
  • ಶರಣಬಸವ ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಉತ್ಸವ
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶವು ಹಲವು ಕ್ಷೇತ್ರಗಳಲ್ಲಿ ಇಂದಿಗೂ ಹಿಂದುಳಿದ ಸ್ಥಿತಿಯಲ್ಲಿದ್ದು, ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸರ್ಕಾರ ಕೈಗೊಂಡಿರುವ ಕ್ರಮ ನಿರೀತ ಮಟ್ಟದಲ್ಲಿ ಪರಿಣಾಮ ಬೀರಿಲ್ಲ ಎಂದು ಅರ್ಥಶಾಸ್ತ್ರಜ್ಞೆ ಹಾಗೂ ಗೋವಿಂದರಾವ್​ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯೆ ಡಾ.ಸಂಗೀತಾ ಕಟ್ಟಿಮನಿ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಉದ್ಘಾಟಿಸಿ ಮಾತನಾಡಿ, 2002ರಲ್ಲಿ ನಂಜುಂಡಪ್ಪ ಸಮಿತಿ ಗುರುತಿಸಿದ್ದ ಅತ್ಯಂತ ಹಿಂದುಳಿದ ತಾಲೂಕುಗಳ ಸಂಖ್ಯೆ ಹಾಗೂ ಗೋವಿಂದರಾವ್​ ಸಮಿತಿ ಗುರುತಿಸಿರುವ ತಾಲೂಕುಗಳ ಸಂಖ್ಯೆಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ನಂಜುಂಡಪ್ಪ ಸಮಿತಿಯು ಅಂದಿನ 31 ತಾಲೂಕುಗಳ ಪೈಕಿ 21 ತಾಲೂಕುಗಳನ್ನು ಅತ್ಯಂತ ಹಿಂದುಳಿದ ಎಂದು ಗುರುತಿಸಿತ್ತು. ಪ್ರಸ್ತುತ ಗೋವಿಂದರಾವ್​ ಸಮಿತಿಯು ಕಲ್ಯಾಣ ಕರ್ನಾಟಕದ ಒಟ್ಟು 50 ತಾಲೂಕುಗಳ ಪೈಕಿ 39 ಅತ್ಯಂತ ಹಿಂದುಳಿದಿವೆ ಎಂದು ಗುರುತಿಸಿರುವುದು ಪ್ರದೇಶದ ಹಿಂದುಳಿದ ಸ್ಥಿತಿಗೆ ಸಾ ಎಂದು ವಿವರಿಸಿದರು.
ಕಲ್ಯಾಣ ಕರ್ನಾಟಕವು ಚಿನ್ನ, ಯುರೇನಿಯಂ ಸೇರಿ ಅಪಾರ ಖನಿಜ ಸಂಪತ್ತು ಹೊಂದಿದೆ. ಬಳ್ಳಾರಿಯ ಕಬ್ಬಿಣದ ಅದಿರು, ಕಲಬುರಗಿಯ ಪೌಷ್ಠಿಕಾಂಶಯುಕ್ತ ತೊಗರಿ ಹಾಗೂ ಅವಿಭಜಿತ ರಾಯಚೂರು ಜಿಲ್ಲೆಯ ಗಂಗಾವತಿಯ ಉತ್ತಮ ಗುಣಮಟ್ಟದ ಭತ್ತದಂತಹ ಸಂಪನ್ಮೂಲಗಳಿದ್ದರೂ, ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಈ ಪ್ರದೇಶದ ತಲಾ ಆದಾಯ ಕಡಿಮೆಯಾಗಿದೆ ಎಂದು ಹೇಳಿದರು.
ಇತ್ತೀಚಿನ ಎನ್​ಎಫ್​ಎಚ್​ಎಸ್​ ವರದಿಯ ಪ್ರಕಾರ, ಕಲ್ಯಾಣ ಕರ್ನಾಟಕದಲ್ಲಿ ಶೇ.27ರಷ್ಟು ಜನಸಂಖ್ಯೆ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇದು ಈ ಪ್ರದೇಶದ ದೊಡ್ಡ ಯುವಶಕ್ತಿಯಾಗಿದ್ದು, ಸೂಕ್ತ ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳ ಮೂಲಕ ಯುವಜನರ ಸಾಮರ್ಥ್ಯ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ವಿಭಾಗದ ಮುಖ್ಯಸ್ಥ ಟಿ.ವಿ.ಶಿವಾನಂದನ್​, ಡಾ.ಸುನಿತಾ, ಅನಿತಾ ಇತರರಿದ್ದರು.
"

ಕಲ್ಯಾಣ ಕರ್ನಾಟಕ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಅಪೌಷ್ಟಿಕತೆಯೂ ಒಂದು. ಇತ್ತೀಚಿನ ಎನ್​ಎಫ್​ಎಚ್​ಎಸ್​ ವರದಿ ಪ್ರಕಾರ ರಾಯಚೂರು ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಶೇ.46 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net