ಜನಗಣತಿ ಕಾರ್ಯಕ್ಕೆ ಗೈರು,ಸಹ ಶಿಕ್ಷಕಿ ಅಮಾನತ್ತು

,
,
Published on
ಕಲಬುರಗಿ: ಭಾರತ ಜನಗಣತಿ ಕಾರ್ಯ-2027ರ ಕಾರ್ಯಕ್ಕೆ ಗೈರಾಗುವ ಮೂಲಕ ಕರ್ತವ್ಯದಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರಿಸಿದ ಅರೋಪದ ಮೇಲೆ ಕಲಬುರಗಿ ದಕ್ಷಿಣ ವಲಯದ ಧರ್ಮಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಜಮುನಾ ಸರಫ್ ಅವರನ್ನು ಜನಗಣತಿ ಕಾಯ್ದೆ-1948 ಸೆಕ್ಷನ್ 11ರ ಪ್ರಕಾರ ಸೇವೆಯಿಂದ ಅಮಾನತ್ತುಗೊಳಿಸಿ ಕಲಬುರಗಿ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿಗಳು ಕಲಬುರಗಿ ಇವರ ಅಧ್ಯಕ್ಷತೆಯಲ್ಲಿ ದಿ.27.02.2026 ರಂದು ನಡೆದ ಸಭೆಯ ನಡಾವಳಿಯಂತೆ ಇದೇ ಏಪ್ರಿಲ್ 5 ರಿಂದ‌10ರ ವರೆಗೆ ನೌಕರರಿಗೆ ತರಬೇತಿ‌ ನೀಡಿ ಇದೇ ಏಪ್ರಿಲ್ 16 ರಿಂದ ಗಣತಿ ಕಾರ್ಯ ಕೈಗೊಳ್ಳಲು ನಿಯೋಜಿಸಲಾಗಿತ್ತು. ಆದರೆ ಸಹ ಶಿಕ್ಷಕಿ ಜಮುನಾ ಸರಫ್ ಅವರು ಗಣತಿ ಕಾರ್ಯಕ್ಕೆ ಗೈರಾಗಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಕಲಬುರಗಿ ತಹಶೀಲ್ದಾರರು ಹಾಗೂ ಜನಗಣತಿ ಚಾರ್ಜ್ ಅಧಿಕಾರಿಗಳು ಕಾರಣ ಕೇಳುವ ನೋಟಿಸ್ ಹೊರಡಿಸಿದ್ದರು. ನೋಟಿಸಿಗೂ ಉತ್ತರ ನೀಡದೆ‌ ಬೇಜವಾಬ್ದಾರಿ ತೋರಿದ್ದರಿಂದ ಜನಗಣತಿ ಕಾರ್ಯಕ್ಕೆ ತೊಂದರೆಯಾಗಿದೆ ಎಂಬ ಕಲಬುರಗಿ ತಹಶೀಲ್ದಾರ ಅವರ ವರದಿ ಆಧಾರದ ಮೇಲೆ ಶಿಕ್ಷಕಿಯನ್ನು ಅಮಾನತ್ತುಗೊಳಿಸಲಾಗಿದೆ.
ನೌಕರರು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡತಕ್ಕದಲ್ಲ. ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ‌ ನಾಗರಿಕ ಸೇವಾ ನಿಯಮ-98 ಎ ಮತ್ತು ಸರ್ಕಾರದ ಅಧಿಸೂಚನೆ ದಿ.10.08.1987ರ ಪ್ರಕಾರ ಜೀವನಾಂಶ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಅದೇಶದಲ್ಲಿ ತಿಳಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net