ಊಟದ ತಟ್ಟೇಲಿ ಹಲ್ಲಿ ಹಿಕ್ಕೆ ಕಂಡು ಅಸ್ವಸ್ಥ

ಸೇಡಂ ತಾಲೂಕಿನ ಮುಧೋಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರು.
ಸೇಡಂ ತಾಲೂಕಿನ ಮುಧೋಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯರು.
Published on

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿಯಲ್ಲಿ ಮುಂದುವರಿದ ಹಾಸ್ಟೆಲ್​ ಅವಾಂತರ
  • ಮುಧೋಳ ವಸತಿಶಾಲೆ 20 ಮಕ್ಕಳಲ್ಲಿ ಹೊಟ್ಟೆ ನೋವು
ಸೇಡಂ: ಜಿಲ್ಲೆಯಲ್ಲಿ ವಸತಿಶಾಲೆಗಳ ಅವಾಂತರ ಸರಣಿ ಮುಂದುವರಿದಿದೆ. ಚಿತ್ತಾಪುರ ತಾಲೂಕಿನ ದಂಡೋತಿ, ಅಫಜಲಪುರ ತಾಲೂಕಿನ ಕರಜಗಿ ಮುರಾರ್ಜಿ ದೇಸಾಯಿ ವಸತಿಶಾಲೆ ಬಳಿಕ ಇದೀಗ ಮುಧೋಳ ಗ್ರಾಮದ ಇಂದಿರಾಗಾಂಧಿ ವಸತಿಶಾಲೆ ಸರದಿ. ಆಹಾರ ಸೇವಿಸಿದ ಸುಮಾರು 20 ಮಕ್ಕಳು ಅಸ್ವಸ್ಥರಾಗಿ ಶನಿವಾರ ರಾತ್ರಿ ಆಸ್ಪತ್ರೆ ಸೇರಿದ್ದಾರೆ.
ಮುಧೋಳ ಗ್ರಾಮದ ಶ್ರೀಮತಿ ಇಂದಿರಾಗಾಂಧಿ ವಸತಿಶಾಲೆಯಲ್ಲಿ 230ಕ್ಕೂ ಅಧಿಕ ಮಕ್ಕಳಿದ್ದು, ಎಂದಿನಂತೆ ಸಂಜೆ 7.30ರ ಸುಮಾರಿಗೆ ಊಟಕ್ಕೆ ಕುಳಿತ್ತಿದ್ದಾರೆ. ಈ ವೇಳೆ 8ನೇ ತರಗತಿಯ ಸುಮಾರು 20 ವಿದ್ಯಾರ್ಥಿನಿಯರು ಒಂದೇ ಸಾಲಿನಲ್ಲಿ ಕುಳಿತು ಭೋಜನ ಮಾಡುತ್ತಿರುವಾಗ ಚನ್ನಮ್ಮ ಎಂಬಾಕೆ ತಟ್ಟೆಯಲ್ಲಿ ಹಲ್ಲಿಯ ಹಿಕ್ಕೆ ಕಾಣಿಸಿದೆ. ಅಕ್ಕ&ಪಕ್ಕದಲ್ಲಿದ್ದ ಸ್ನೇಹಿತರಿಗೆ ತೋರಿಸಿ ಪ್ರಾಚಾರ್ಯರ ಗಮನಕ್ಕೆ ತಂದಿದ್ದಾಳೆ. ಕೂಡಲೇ ಎಲ್ಲರಿಗೂ ಊಟ ನಿಲ್ಲಿಸುವಂತೆ ಸೂಚಿಸಿ ಸುಸಲಾ ಮಾಡಿಸಿಕೊಟ್ಟಿದ್ದಾರೆ.
ರಾತ್ರಿ ವೇಳೆ ಚನ್ನಮ್ಮ ಮತ್ತು ಇನ್ನೊಬ್ಬಳು ವಾಂತಿ ಮಾಡಿಕೊಂಡಿದ್ದು, ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಇದರಿಂದ ಗಾಬರಿಯಾದ ಇನ್ನುಳಿದ 18 ಮಕ್ಕಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಎಲ್ಲರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ರಾತ್ರಿಯಿಡೀ ವೈದ್ಯರು ಚಿಕಿತ್ಸೆ ನೀಡಿದ್ದರಿಂದ ಚೇತರಿಸಿಕೊಂಡಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿಗಳು ಆಹಾರ ಮಾದರಿ ತೆಗೆದುಕೊಂಡು ಹೋಗಿದ್ದಾರೆ.
ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್​ ಊಡಗಿ, ಡಿವೈಎಸ್​ಪಿ ಸಂಗಮನಾಥ ಹಿರೇಮಠ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಪಿಐ ಸಂಜೀವಕುಮಾರ ಕುಂಬಾರಗೇರಿ, ಟಿಎಚ್​ಒ ಡಾ.ಸಂಜುಕುಮಾರ ಪಾಟೀಲ್​, ಡಾ.ಪ್ರಣಯ್​ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ಹಾಸ್ಟೆಲ್​ನಲ್ಲಿ ವ್ಯವಸ್ಥೆ ಪರಿಶೀಲಿಸಿದರು.
"

ಒಬ್ಬರನ್ನು ಕಂಡು ಇನ್ನೊಬ್ಬರು ಗಾಬರಿಯಾಗಿ ವಾಂತಿ ಮಾಡಿಕೊಂಡಿದ್ದಾರೆ. ಮುಂಜಾಗ್ರತೆಯಾಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದು, ಎಂದಿನಂತೆ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಅಡುಗೆ ಕೋಣೆ, ಸ್ವಚ್ಛತೆ ಸೇರಿ ಸಿಬ್ಬಂದಿ ಕೊರತೆ ಇರುವುದರಿಂದ ಉತ್ತಮ ಸೇವೆಗೆ ಅನನುಕೂಲವಾಗುತ್ತಿದೆ.

— > ಶಾಂತಪ್ಪ ಮ್ಯಾಗೇರಿ ಪ್ರಾಚಾರ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net