ಗಾರಂಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂಡದಳ್ಳಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಅವಧಿಯಲ್ಲಿ ಜನ ಹಾಗೂ ರೈತರ ಅನುಕೂಲಕ್ಕಾಗಿ ಕೆರೆ ನಿರ್ಮಿಸಲಾಗಿತ್ತು. 49.57 ಎಂಸಿ (ಮಿಲಿಯನ್ ಕ್ಯೂಬಿಕ್) ನೀರು ಸಂಗ್ರಹ ಸಾಮಾರ್ಥ್ಯ ಹೊಂದಿದ್ದು, ಸುಮಾರು 200 ಹೆಕ್ಟೇರ್ ಪ್ರದೇಶಕ್ಕೆ ಈ ಕೆರೆ ನೀರುಣಿಸುತ್ತಿದೆ. ಮಳೆಗಾಲದಲ್ಲಿ ಸಂಪೂರ್ಣ ಭರ್ತಿಯಾಗಿ ಬೇಸಿಗೆಯಲ್ಲಿ ಭರ್ಜರಿ ನೀರು ನೀಡುತಿತ್ತು. ಕೆಲ ವರ್ಷಗಳಿಂದ ಅಧಿಕಾರಿಗಳು ಕೆರೆಯ ನಿರ್ವಹಣೆ ಮರೆತಿದ್ದರಿಂದ ಎಲ್ಲೆಂದರಲ್ಲಿ ಗಿಡಗಂಟಿಗಳು ಬೆಳೆದಿವೆ. ಏರಿಯ ಮೇಲಿನ ರಸ್ತೆಯಂತು ಮುಳ್ಳಿನ ಗಿಡಗಳಿಂದಲೇ ಆವೃತವಾಗಿದೆ. ಬೇರುಗಳು ಕೆರೆಯ ಏರಿ ಆಳಕ್ಕೆ ಇಳಿಯುತ್ತಿರುವುದರಿಂದ, ಏರಿ ಸಡಿಲಗೊಂಡು ಒಡೆಯುವ ಅಪಾಯ ಎದ್ದುಕಾಣುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.