ಹುಲಸೂರು: ಗಡಿಗೌಡಗಾಂವ ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ಸಮರ್ಪಕ ವಿದ್ಯುತ್ ಪೂರೈಕೆ ಆಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಮತ್ತು ಸಾರ್ವಜನಿಕರು ಶುಕ್ರವಾರ ಹುಲಸೂರು ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಮಿಂಚಿನ ಪ್ರತಿಭಟನೆ ನಡೆಸಿದರು.
ಜೆಸ್ಕಾಂ ಇಲಾಖೆ ನಿರ್ಲಕ್ಷ್ಯ ದಿಂದ ವಿದ್ಯುತ್ ಸಮಸ್ಯೆಯಾಗುತ್ತಿದ್ದರಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು. ಬೇಸಿಗೆ ತಾಪಮಾನ ಹೆಚ್ಚು ಇರುವುದರಿಂದ ಕುಡಿವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಕಬ್ಬು, ತರಕಾರಿ ಸೇರಿ ವಿವಿಧ ಬೆಳೆಗಳಿಗೆ ನೀರುಣಿಸಲು ಹಾಗೂ ಜಾನುವಾರಗಳಿಗೆ ನೀರು ಇಲ್ಲದೆ ರೈತರು ಕಂಗಾಲಾಗಿದ್ದಾರೆ ಎಂದು ದೂರಿದರು.
ತಹಸೀಲ್ದಾರ್ ಶಿವಾನಂದ ಮೇತ್ರೆ ಮುಖ್ಯರಸ್ತೆಯಿಂದ ಹಾದು ಹೋಗುವ ಸಂದರ್ಭದಲ್ಲಿ ರೈತರು ಜೆಸ್ಕಾಂ ಕಚೇರಿಯಲ್ಲಿ ಸೇರಿರುವುದನ್ನು ಗಮನಿಸಿ ಭೇಟಿ ಮಾಡಿ ಸಮಸ್ಯೆ ಆಲಿಸಿ ಬಸವಕಲ್ಯಾಣ ಜೆಸ್ಕಾಂ ಇಲಾಖೆ ಸಹಾಯಕ ನಿರ್ದೇಶಕ ಗಣಪತಿ ಮೈನಾಳೆ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಸಂಜೆಯೊಳಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು.
ಒಂದು ವೇಳೆ ಸಮಸ್ಯೆ ಪರಿಹಾರವಾಗದಿದ್ದರೆ ಭಾನುವಾರ ಎತ್ತಿನ ಗಾಡಿಗಳೊಂದಿಗೆ ಹುಲಸೂರು-ಬಸವಕಲ್ಯಾಣ ರಸ್ತೆ ತಡೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದರು. ನಂತರ ತಹಸೀಲ್ದಾರ್ರು ಸಮಾಧಾನಪಡಿಸಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.