ಮೆಣಸಿನಕಾಯಿ ಬೆಳೆಯತ್ತ ರೈತರ ಚಿತ್ತ

ಕುರುಗೋಡಿನ ನರ್ಸರಿಯಲ್ಲಿ ಮೆಣಸಿನಕಾಯಿ ಸಸಿ ಬೆಳೆಸುತ್ತಿರುವುದು. ಲಕ್ಷ್ಮೀಪುರದಲ್ಲಿ ಮೆಣಸಿನಕಾಯಿ ಸಸಿ ನಾಟಿ ಮಾಡುತ್ತಿರುವುದು.
ಕುರುಗೋಡಿನ ನರ್ಸರಿಯಲ್ಲಿ ಮೆಣಸಿನಕಾಯಿ ಸಸಿ ಬೆಳೆಸುತ್ತಿರುವುದು. ಲಕ್ಷ್ಮೀಪುರದಲ್ಲಿ ಮೆಣಸಿನಕಾಯಿ ಸಸಿ ನಾಟಿ ಮಾಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • 8 ಸಾವಿರ ಹೆಕ್ಟೇರ್ ಹೆಚ್ಚಳ ಸಾಧ್ಯತೆ
  • ಜಮೀನಿನ ಗುತ್ತಿಗೆ ಮೊತ್ತ ಅಧಿಕ
ಕುರುಗೋಡು: ಕಳೆದ ಹಂಗಾಮಿನಲ್ಲಿ ಉತ್ತಮ ಬೆಲೆ ದೊರೆತ ಹಿನ್ನೆಲೆಯಲ್ಲಿ ಬಹುತೇಕ ರೈತರು ಮೆಣಸಿನಕಾಯಿ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಇದರಿಂದ ಮೆಕ್ಕೆಜೋಳ, ತೋಗರಿ ಸೇರಿದಂತೆ ಇತರ ಬಿತ್ತನೆಬೀಜ ಖರೀದಿ ಕುಂಠಿತವಾಗಿದೆ.
ಕಳೆದ ಒಂದು ವಾರದಿಂದ ತಾಲೂಕಿನ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ರೈತರು ಈಗಾಗಲೇ ಭೂಮಿ ಹದಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ. ತಾಲೂಕಿನಲ್ಲಿ ಮಳೆಯಾಶ್ರಿತ 2,390, ಕೊಳವೆಬಾವಿ ಹಾಗೂ ನೀರಾವರಿ 36,317 ಹೆಕ್ಟೇರ್ ಭೂಮಿ ಸೇರಿ ಒಟ್ಟು ಸಾಗುವಳಿ ಭೂಮಿ 38,707 ಹೆಕ್ಟೇರ್ ಇದೆ.
ಮಳೆ ಮತ್ತು ಕೊಳವೆಬಾವಿ ಆಶ್ರಿತ ಕೆಲ ರೈತರು ಈಗಾಗಲೇ ಮೆಕ್ಕೆಜೋಳ ಸೇರಿದಂತೆ ಇತರ ಬೆಳೆ ಬಿತ್ತನೆ ಜತೆಗೆ 500 ಹೆಕ್ಟೇರ್ ಮೆಣಸಿನಕಾಯಿ ನಾಟಿ ಮಾಡಿದ್ದಾರೆ. ಉಳಿದ ರೈತರು ಆಗಸ್ಟ್‌ನಲ್ಲಿ ನಾಟಿ ಹಾಗೂ ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಆದರೆ 2024ರ ಹಂಗಾಮಿನಲ್ಲಿ ಮಣಸಿನಕಾಯಿ ಬೆಲೆ ಕುಸಿತ, ಇಳುವರಿ ಕುಠಿತ ಸೇರಿ ನಾನಾ ಕಾರಣದಿಂದ ಕಳೆದ ಬಾರಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಪರ್ಯಾಯವಾಗಿ ಮೆಕ್ಕೆಜೋಳ ಬೆಳೆಯಲಾಗಿತ್ತು. ಅಲ್ಲದೆ ತೋಗರಿ, ಹತ್ತಿ, ಭತ್ತದ ಕಡೆ ಒಲವು ತೋರಿದ್ದರಿಂದ ಮೆಣಸಿನಕಾಯಿ 16 ಸಾವಿರ ಹೆಕ್ಟೇರ್ ಪ್ರದೇಶದಿಂದ 10 ಸಾವಿರ ಹೆಕ್ಟೆರ್‌ಗೆ ಕುಸಿತ ಕಂಡಿತ್ತು.
ಕಳೆದ ಹಂಗಾಮಿನಲ್ಲಿ 5,531 ತಳಿಯ ಮೆಣಸಿನಕಾಯಿ 12 ರಿಂದ 15 ಸಾವಿರ ರೂ., 2043 ತಳಿ 25 ರಿಂದ 30 ಸಾವಿರ ರೂ., ರುದ್ರಬ್ಯಾಡಗಿ 40 ರಿಂದ 48 ಸಾವಿರ ರೂ., ಕಡ್ಡಿ ಮತ್ತು ಡಬ್ಬಿ ಬ್ಯಾಡಗಿ 40ರಿಂದ 50ಸಾವಿರ ರೂ. ತನಕ ಬಂಪರ್ ಬೆಲೆಗೆ ಮಾರಾಟವಾಗಿತ್ತು. ಇದರಿಂದ ಬಹುತೇಕ ರೈತರು ವಿವಿಧ ತಳಿ ಬಿತ್ತನೆಬೀಜ ಖರೀದಿಗೆ ಉತ್ಸಾಹ ತೋರುತ್ತಿದ್ದಾರೆ. ಅದರಲ್ಲೂ ಈ ಬಾರಿ ರುದ್ರ ಬ್ಯಾಡಗಿ ತಳಿಗೆ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಮೆಣಸಿನಕಾಯಿ ಬಿತ್ತನೆ 16 ರಿಂದ 18 ಸಾವಿರ ಹೆಕ್ಟೇರ್ ಪ್ರದೇಶ ತಲುಪುವ ಸಾಧ್ಯತೆ ಇದೆ.

ಭತ್ತ-ಮೆಕ್ಕೆಜೋಳ ಕೇಳುವವರಿಲ್ಲ

ಮೇನಲ್ಲಿ ಮಳೆ ಕೊರತೆ ಹಾಗೂ ಹೆಚ್ಚುತ್ತಿರುವ ಮೆಣಸಿನಕಾಯಿ ಬೆಳೆ ವ್ಯಾಪ್ತಿ ಹಿನ್ನೆಲೆಯಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಭತ್ತ ಬಿತ್ತನೆ ಬೀಜ 150 ಕ್ವಿಂಟಾಲ್ ದಾಸ್ತಾನಿದ್ದು, 15 ಕ್ವಿಂಟಾಲ್ ಮಾರಾಟವಾಗಿದೆ. ಇನ್ನು ಮೆಕ್ಕೆಜೋಳ 10 ಕ್ವಿಂಟಾಲ್ ಪೈಕಿ 2 ಕ್ವಿಂಟಾಲ್, ತೊಗರಿ 20 ಕ್ವಿಂಟಾಲ್ ಪೈಕಿ ಒಂದು ಕ್ವಿಂಟಾಲ್ ಮಾರಾಟವಾಗಿದೆ. ಸಜ್ಜೆ, ಸೂರ್ಯಕಾಂತಿ ಮಾರಾಟವೇ ಆಗಿಲ್ಲ. ತಾಲೂಕಿನಲ್ಲಿ ವಿವಿಧ ಖಾಸಗಿ ಅಂಗಡಿಗಳಲ್ಲಿ ಮಾನ್ಯತೆ ಪಡೆದ ವಿವಿಧ ಕಂಪನಿಗಳ ಮೆಣಸಿನಕಾಯಿ ಬಿತ್ತನೆಬೀಜ ಮಾರಾಟ ಮಾಡಲಾಗುತ್ತಿದೆ. ಆದರೆ ಕೆಲವರು ಪರವಾನಿಗೆ ಇಲ್ಲದ ಬಿತ್ತನೆಬೀಜವನ್ನು ನೇರವಾಗಿ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಹೀಗಿದ್ದರೂ ಅಧಿಕಾರಿಗಳು ಮೌನವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.

ರೈತರು ಮೆಣಸಿನಕಾಯಿ 5531 ತಳಿಗಿಂತ ರುದ್ರಬ್ಯಾಡಗಿ, 2043 ಹಾಗೂ ಇತರ ಬ್ಯಾಡಗಿ ಬಿತ್ತನೆಬೀಜ ಹೆಚ್ಚು ಖರೀದಿ ಮಾಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ರೈತರು ಮೆಣಸಿನಕಾಯಿ ಬಿತ್ತನೆಬೀಜ ಹೆಚ್ಚು ಖರೀದಿಸಿದ್ದಾರೆ.

— ರಾಜಶೇಖರ, ಬಿತ್ತನೆಬೀಜ ಮಾರಾಟಗಾರ, ಕುರುಗೋಡು

ಮೆಣಸಿನಕಾಯಿ ಬೆಳೆ ಕುರಿತು ರೈತರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇದರಿಂದ ತಾಲೂಕಿನಲ್ಲಿ ಕಳೆದ ಬಾರಿಗಿಂತ ಆರು ಸಾವಿರ ಹೆಕ್ಟೇರ್ ಬಿತ್ತನೆ ಹೆಚ್ಚಳ ಆಗಬಹುದು. ಒಂದೇ ಬೆಳೆ ಬೆಳೆಯುವ ಬದಲು ಪರ್ಯಾಯ ಬೆಳೆಯನ್ನು ರೈತರು ಬೆಳೆಯಬೇಕು. ಇಲ್ಲದಿದ್ದರೆ ದರ ಕುಸಿತದಂತಹ ಪರಿಣಾಮ ಎದುರಿಸಬೇಕಾಗುತ್ತದೆ.

— ಜೆ.ಶಂಕರ್,
ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಬಳ್ಳಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net