ರಾಜ್ಯದಲ್ಲಿ ಮುಂಗಾರು ದುರ್ಬಲ: ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಳೆ ಕುಂಠಿತ- monsoon weak

ಮುಂಗಾರು ದುರ್ಬಲ
ಮುಂಗಾರು ದುರ್ಬಲ
Published on
ಬೆಂಗಳೂರು: ರಾಜ್ಯದಲ್ಲಿ ಜೂ 4ರಂದು ಪ್ರವೇಶಿಸಿದ್ದ ಮುಂಗಾರು, ವಾರ ಕಳೆಯುವಷ್ಟರಲ್ಲೇ ದುರ್ಬಲಗೊಂಡಿದೆ.
ಮಾರುತಗಳು ಪ್ರವೇಶಿಸುವ ವೇಳೆ ಸಾಕಷ್ಟು ಪ್ರಮಾಣದಲ್ಲಿ ತೇವಾಂಶ ಭರಿತ ಮೋಡಗಳಿದ್ದ ಕಾರಣ ಒಂದೆರಡು ದಿನ ಕರಾವಳಿ ಭಾಗಗಳಲ್ಲಿ ಬಿರುಸಾಗಿ ವರ್ಷಧಾರೆಯಾಗಿತ್ತು. ಇದೀಗ ಮಾನ್ಸೂನ್ ದುರ್ಬಲವಾಗಿದೆ. ಕೇರಳ, ಕರ್ನಾಟಕ ಮತ್ತು ತಮಿಳುನಾಡು ಸೇರಿ ದಕ್ಷಿಣ ಭಾರತದಲ್ಲಿದ್ದ ಮಾನ್ಸೂನ್, ಮಧ್ಯಭಾರತದತ್ತ ಪ್ರವೇಶಿಸಲು ಕೆಲ ಸಮಯ ಹಿಡಿಯಲಿದೆ. ಅರಬ್ಬಿಸಮುದ್ರ, ಬಂಗಾಳಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಮಾನ್ಸೂನ್ ಬಲಗೊಳ್ಳುವುದಕ್ಕೆ ಪೂರಕ ವಾತಾವರಣ ಇಲ್ಲ. ಮುಂಗಾರು ದುರ್ಬಲವಾಗಿರುವ ಪರಿಣಾಮ ಮೋಡ ಇದ್ದರೂ ಸರಿಯಾಗಿ ಮಳೆಯಾಗುತ್ತಿಲ್ಲ. ವಾರದ ಬಳಿಕ ಮಾರುತಗಳು ಬಲಗೊಳ್ಳುವ ಸಾಧ್ಯತೆ ಇದ್ದು, ಮತ್ತೆ ಬಿರುಸಾಗಿ ಸುರಿಯಲಿದೆ ಎನ್ನುತ್ತಾರೆ ಹಿರಿಯ ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿ.
ರಾಜ್ಯಾದ್ಯಂತ ಈವರೆಗೆ ವಾಡಿಕೆಯಂತೆ ಮಳೆಯಾಗಿದ್ದರೂ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಮಳೆ ಕುಂಠಿತವಾಗಿದೆ. ಉತ್ತರ ಕರ್ನಾಟಕದಲ್ಲಿ ವಾಡಿಕೆಯಂತೆ ಮಳೆ ಸುರಿದಿದೆ. ಮಾನ್ಸೂನ್ ಆರಂಭದ ಸಮಯದಲ್ಲೇ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಬೇಕಿತ್ತು. ಆದರೆ, ಅಷ್ಟೇನೂ ಮಳೆ ಸುರಿದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
4 ದಿನ ಸಾಧಾರಣ ವರ್ಷಧಾರೆ:
ಉಡುಪಿ, ದಕ್ಷಿಣ ಕನ್ನಡದಲ್ಲಿ ಮುಂದಿನ 2 ದಿನ ಹಾಗೂ ಧಾರವಾಡ, ಗದಗ, ಹಾವೇರಿಯಲ್ಲಿ ಜೂ 11ರಂದು ಜೋರು ಮಳೆಯಾಗುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು,ಚಾಮರಾಜನಗರ, ಮಂಡ್ಯ, ಮೈಸೂರು,ಬೆಂ.ಗ್ರಾಮಾಂತರ, ಬೆಂ.ದಕ್ಷಿಣ ಸೇರಿ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಸಾಧಾರಣ ಮಳೆಯಾಗಲಿದೆ. ಬೆಂಗಳೂರು ನಗರದಲ್ಲಿ ಮುಂದಿನ 2 ದಿನ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ವರ್ಷಧಾರೆಯಾಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 21 ಡಿ.ಸೆ. ದಾಖಲಾಗಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net