ವಡಗೇರಾ: ಪಟ್ಟಭದ್ರ ಶಕ್ತಿಗಳು ಸಮಾಜದಲ್ಲಿ ಸುಳ್ಳು ಸಂದೇಶ ಹರಡುವ ಮೂಲಕ ಶಾಂತಿ ಕದಡುವ ಕೆಲಸ ಮಾಡುತ್ತಿವೆ. ಸದೃಢ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಾಮರಸ್ಯದಿಂದ ಬಾಳಬೇಕು ಎಂದು ದೇವರ ಗುಂಡಗುರ್ತಿ ಶ್ರೀ ಮೈಲಾರಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿಜಲಿಂಗ ಸ್ವಾಮೀಜಿ ನುಡಿದರು.
ಚೆನ್ನೂರ(ಜೆ) ಗ್ರಾಮದಲ್ಲಿ ಶುಕ್ರವಾರ ಮಸೀದಿ ಉದ್ಘಾಟಿಸಿ ಮಾತನಾಡಿದ ಅವರು, ಊರಲ್ಲಿ ಎಲ್ಲರೂ ಒಗ್ಗಟ್ಟಾಗಿ ಮೊಹರಂ ಹಬ್ಬ ಆಚರಿಸುವ ಮೂಲಕ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಬೇಕು ಎಂದರು.
ಜಿಪಂ ಮಾಜಿ ಸದಸ್ಯ ಶ್ರೀನಿವಾಸರಡ್ಡಿ ಪಾಟೀಲ್ ಚೆನ್ನೂರ ಮಾತನಾಡಿ, ಸರ್ವ ಧರ್ಮಗಳು ಶಾಂತಿ ಮತ್ತು ಸಹಬಾಳ್ವೆ, ಮಾನವೀಯ ಸಂದೇಶಗಳನ್ನು ನೀಡಿವೆ ಎಂದು ಹೇಳಿದರು.