ವಿದ್ಯಾರ್ಥಿಗಳ ವಿದೇಶ ಶಿಕ್ಷಣಕ್ಕೆ ಸೌಲಭ್ಯ ಕಲ್ಪಿಸಿ

ಕಲಬುರಗಿ ಡಾ.ಎಸ್​.ಎಂ.ಪಂಡಿತ ರಂಗಮಂದಿರದಲ್ಲಿ ಗುರುವಾರ ಪ್ರಭುಲಿಂಗ ಕಿಣಗಿ ನೇತೃತ್ವದ ಲೋಹಿಯಾ ಕಲಾ ತಂಡದಿಂದ ಏಕ್​ ಭಾರತ ಶ್ರೇಷ್ಠ ಭಾರತ ನಾಟಕ ಪ್ರದರ್ಶನಗೊಂಡಿತು.
ಕಲಬುರಗಿ ಡಾ.ಎಸ್​.ಎಂ.ಪಂಡಿತ ರಂಗಮಂದಿರದಲ್ಲಿ ಗುರುವಾರ ಪ್ರಭುಲಿಂಗ ಕಿಣಗಿ ನೇತೃತ್ವದ ಲೋಹಿಯಾ ಕಲಾ ತಂಡದಿಂದ ಏಕ್​ ಭಾರತ ಶ್ರೇಷ್ಠ ಭಾರತ ನಾಟಕ ಪ್ರದರ್ಶನಗೊಂಡಿತು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಜಿ.ಗೋಪಾಲರಾವ್​ ಮನವಿ
  • ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ ಜಾಗೃತಿ ವಿಚಾರಗೋಷ್ಠಿ
ಕಲಬುರಗಿ: ಪರಿಶಿಷ್ಟರು ಇಂದಿಗೂ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ನಿರೀತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ವಿದೇಶಿ ಶಿಕ್ಷಣದ ಆಸೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ದೊರೆಯುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆ ಈ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಡಾ.ಜಿ.ಗೋಪಾಲರಾವ್​ ಹೇಳಿದರು.
ಡಾ.ಎಸ್​.ಎಂ. ಪಂಡಿತ ರಂಗಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಲೋಹಿಯಾ ಕಲಾ ತಂಡದ ಸಹಯೋಗದಡಿ ಗುರುವಾರ ಏರ್ಪಡಿಸಿದ್ದ ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ ಹಾಗೂ ಜಾಗೃತಿ ವಿಚಾರಗೋಷ್ಠಿ ಮತ್ತು ಏಕ್​ ಭಾರತ್​ ಶ್ರೇಷ್ಠ ಭಾರತ್​ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಮಾತನಾಡಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಜಾತಿ ಪ್ರಮಾಣಪತ್ರ ನೀಡಿಕೆ ಪ್ರಕ್ರಿಯೆ ಸರಳಗೊಳಿಸಿದೆ. ದೌರ್ಜನ್ಯ ತಡೆ ಕಾಯ್ದೆ ಪ್ರಕರಣಗಳ ಮಾಹಿತಿ ವಿಳಂಬದಿಂದ ಸಂತ್ರಸ್ತರಿಗೆ ನ್ಯಾಯ ಸಿಗುವುದು ತಡವಾಗುತ್ತಿದೆ. ಇದನ್ನು ಹೋಗಲಾಡಿಸಲು ಸಮುದಾಯದ ಮುಖಂಡರ ಸಹಕಾರ ಅಗತ್ಯ ಎಂದರು.
ನ್ಯಾಯವಾದಿ ರಾಜು ಮುದ್ದಡಗಿ ಉಪನ್ಯಾಸ ನೀಡಿ, ತಹಸೀಲ್ದಾರರು ಎಸ್ಸಿ ಎಸ್ಟಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಿ ತಳಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಕೋರಿದರು.
ಹಿರಿಯ ಮುಖಂಡ ಎ.ಬಿ. ಹೊಸಮನಿ ಮಾತನಾಡಿ, ಹಿಂದೆಲ್ಲ ದೌರ್ಜನ್ಯ ಪ್ರಕರಣಗಳಲ್ಲಿ ಸಾವು ಸಂಭವಿಸಿದಾಗ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಪರಿಹಾರ ನೀಡುತ್ತಿದ್ದರು. ಆದರೆ ಇತ್ತೀಚೆಗೆ ಆಡಳಿತಾತ್ಮಕ ಕೆಲಸಗಳ ವಿಳಂಬದಿಂದ ನೊಂದ ಕುಟುಂಬಗಳು ಕಚೇರಿಗಳಿಗೆ ಅಲೆಯುವಂತಾಗಿದೆ. ಜಿಲ್ಲಾಡಳಿತ ಕಾಲಮಿತಿಯಲ್ಲಿ ಪರಿಹಾರ ಒದಗಿಸುವತ್ತ ಗಮಹರಿಸಬೇಕು. ಎಸ್ಸಿ ಎಸ್ಟಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆ 1995, 2015 ಮತ್ತು 2016ರ ತಿದ್ದುಪಡಿಗಳ ಬಗ್ಗೆ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಅನಿಲಕುಮಾರ ಜಾಧವ್​, ಸಿದ್ಧಾರೂಢ ಸಮತಾ ಜೀವನ್​, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚೇತನ್​ ಗುರಿಕಾರ್​, ಸತೀಶ್​ ಸಂಗನ, ವಿಜಯಲಕ್ಷಿ$್ಮ, ಪ್ರಭುಲಿಂಗ, ಬುಡ್ಗ ಜಂಗಮ ಸಮಾಜ ಜಿಲ್ಲಾಧ್ಯಕ್ಷ ಪಂಡಿತ ಸರ್ವಾಟಿ, ಅಲೆಮಾರಿ ಸಮಾಜ ಜಿಲ್ಲಾಧ್ಯಕ್ಷ ಅನೀಲ್​ ಕಾಂಬಳೆ ಇತರರಿದ್ದರು. ನಂತರ ಪ್ರಭುಲಿಂಗ ಕಿಣಗಿ ನೇತೃತ್ವದ ಲೋಹಿಯಾ ಕಲಾ ತಂಡದಿಂದ ಏಕ್​ ಭಾರತ್​ ಶ್ರೇಷ್ಠ ಭಾರತ್​ ನಾಟಕ ಪ್ರದರ್ಶಿಸಲಾಯಿತು.
"

ಅಧುನಿಕತೆ ಇಂದಿನ ಜೀವನದಲ್ಲಿ ಹಳೆಯ ಶೋಷಣೆ ಪದ್ಧತಿಗಳು ಮರುಕಳಿಸುತ್ತಿರುವುದು ಬೇಸರದ ಸಂಗತಿ. ಶಿಕ್ಷಣ, ಅರಿವು, ಜಾಗೃತಿ ಮೂಲಕವೇ ಜಾತಿ ಪದ್ಧತಿ ಹೋಗಲಾಡಿಸಬೇಕಿದೆ. ಈ ದಿಕ್ಕಿನಲ್ಲಿ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು.

> ಡಾ.ಜಿ.ಗೋಪಾಲರಾವ್​

ಸದಸ್ಯ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net