ಗೊಂದಲದ ಗೂಡಾದ ಅಬಕಾರಿ ಕೌನ್ಸೆಲಿಂಗ್ ವರ್ಗಾವಣೆ: ವರ್ಷದಿಂದ ಪೋಸ್ಟಿಂಗ್ ಸಿಗದ ಕೆಲ ಅಬಕಾರಿ ನಿರೀಕ್ಷಕರು ಅತಂತ್ರ-Excise counseling

 ಅಬಕಾರಿ ಇಲಾಖೆ
ಅಬಕಾರಿ ಇಲಾಖೆ
Published on
ಬೆಂಗಳೂರು:ವರ್ಗಾವಣೆ ದಂಧೆಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯಲ್ಲಿ 2025ರ ಜು.8ರಿಂದ ಜಾರಿಗೆ ಬಂದಿರುವ ಆನ್‌ಲೈನ್ ಕೌನ್ಸೆಲಿಂಗ್ ವರ್ಗಾವಣೆ ಪ್ರಕ್ರಿಯೆಯು ಗೊಂದಲದ ಗೂಡಾಗಿದೆ.
ಕಳೆದ ವರ್ಷ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಸಂದರ್ಭದಲ್ಲಿ ಅಬಕಾರಿ ಇಲಾಖೆಯಲ್ಲಿ ಗ್ರೂಪ್ ‘ಸಿ’ ವೃಂದದ 151 ಅಬಕಾರಿ ನಿರೀಕ್ಷಕರು, 114 ಉಪ ನಿರೀಕ್ಷಕರು, 7 ಮುಖ್ಯ ಪೇದೆ ಮತ್ತು 415 ಪೇದೆ ಸೇರಿ ಒಟ್ಟು 687 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸೇವಾವಧಿ ಹಿರಿತನ ಆಧಾರದ ಮೇರೆಗೆ ಕೌನ್ಸೆಲಿಂಗ್ ಮೂಲಕ ವರ್ಗಾಯಿಸಲಾಗಿತ್ತು. ಸೇವಾ ಹಿರಿತನ ಮತ್ತು ಅಂಕಗಳ ಆಧಾರದಲ್ಲಿ ಅಬಕಾರಿ ನಿರೀಕ್ಷಕರು, ಕಾನೂನುಬದ್ಧವಾಗಿ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರು. ಕೆಲವರಿಗೆ ಪೋಸ್ಟಿಂಗ್ ನೀಡಲಾಗಿತ್ತು, ಅದರಂತೆ, ಆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ನಂತರ ಉಂಟಾದ ನ್ಯಾಯಾಂಗ ವ್ಯಾಜ್ಯಗಳ ಪರಿಣಾಮವಾಗಿ ಕೆಲ ಅಬಕಾರಿ ನಿರೀಕ್ಷಕರಿಗೆ ವರ್ಷದಿಂದ ಪೋಸ್ಟಿಂಗ್ ಸಿಗದೆ ಕಂಗಾಲಾಗಿದ್ದಾರೆ.
ಇದೀಗ, ಹಿಂದಿನ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲವನ್ನು ಇತ್ಯರ್ಥಪಡಿಸದೆ ಪ್ರಸಕ್ತ ಸಾಲಿನಲ್ಲಿ ಹೊಸದಾಗಿ ಆನ್‌ಲೈನ್ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಲು ಇಲಾಖೆ ಮುಂದಾಗಿದೆ. ಇದಕ್ಕೆ ಹುದ್ದೆ ಸಿಗದೆ ಅತಂತ್ರ ಸ್ಥಿತಿಯಲ್ಲಿರುವ ನಿರೀಕ್ಷಕರ ಪರವಾಗಿ ಅಬಕಾರಿ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ. ಸರ್ಕಾರ ಜಾರಿಗೊಳಿಸಿದ ವರ್ಗಾವಣೆ ನೀತಿ ಹಾಗೂ ಕೌನ್ಸೆಲಿಂಗ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಡಳಿತಾತ್ಮಕ ಉದ್ದೇಶಕ್ಕೆ ನ್ಯಾಯಾಲಯದ ಆದೇಶದಿಂದ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಇಲಾಖೆ, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವ ಮೂಲಕ ಅನುಕೂಲಕರ ಆದೇಶ ಪಡೆದುಕೊಂಡಲ್ಲಿ ಮಾತ್ರ ಮೂಲ ಕೌನ್ಸೆಲಿಂಗ್ ಪ್ರಕ್ರಿಯೆ ಉದ್ದೇಶ ಸಂಪೂರ್ಣವಾಗಿ ಈಡೇರಲಿದೆ.
ಪಾರದರ್ಶಕತೆ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಿಸಿದ ಉನ್ನತ ಅಧಿಕಾರಿಗಳ ಉದ್ದೇಶ ಉತ್ತಮವಾಗಿತ್ತು. ಆದರೆ, ಈಗಾಗಲೇ ಆಯ್ಕೆಗೊಂಡು ಹುದ್ದೆ ಸಿಗದೆ ಅತಂತ್ರ ಸ್ಥಿತಿಯಲ್ಲಿರುವ ಅಧಿಕಾರಿಗಳ ಸಮಸ್ಯೆ ಬಗೆಹರಿಸಿ ಹೊಸ ಕೌನ್ಸೆಲಿಂಗ್ ಆರಂಭಿಸಬೇಕು. ಹಾಗಾಗಿ, ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಂತೆ ಅಧಿಕಾರಿಗಳ ಹಕ್ಕು ರಕ್ಷಿಸಿ ನ್ಯಾಯಸಮ್ಮತ ಪರಿಹಾರವನ್ನು ಸರ್ಕಾರ ಕೈಗೊಳ್ಳಬೇಕು ಎಂಬ ಅಭಿಪ್ರಾಯ ಇಲಾಖೆಯ ವಲಯದಲ್ಲಿ ಕೇಳಿಬಂದಿದೆ.
ಪ್ರಸಕ್ತ ವರ್ಷದಿಂದ ಗ್ರೂಪ್ ‘ಬಿ’ ವೃಂದದ ಅಧಿಕಾರಿಗಳ ವರ್ಗಾ:
ಕಳೆದ ವರ್ಷ ಇಲಾಖೆಯಲ್ಲಿ ಗ್ರೂಪ್ ‘ಸಿ’ ವೃಂದದ ಅಬಕಾರಿ ನಿರೀಕ್ಷರು, ಉಪ ನಿರೀಕ್ಷಕರು, ಮುಖ್ಯಪೇದೆ ಮತ್ತು ಪೇದೆಗಳನ್ನು ಸೇವಾ ಹಿರಿತನ ಆದಾರದಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿತ್ತು.ಇದರಿಂದಾಗಿ ಸಾವಿರಾರು ಅಧಿಕಾರಿಗಳಿಗೆ ಅನುಕೂಲವಾಗುವ ಜತೆಗೆ ವರ್ಗಾವಣೆಗೆ ಕೋಟ್ಯಂತರ ರೂ. ಹಣ ನೀಡುವುದು ತಪ್ಪಿತ್ತು. ಇದೀಗ ಮೊದಲ ಬಾರಿ ಸರ್ಕಾರ, ಗ್ರೂಪ್ ‘ಬಿ’ ವೃಂದದ ಅಬಕಾರಿ ಉಪ ಅಧೀಕ್ಷಕರು, ಅಧೀಕ್ಷಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಬಜೆಟ್‌ನಲ್ಲಿ ಘೋಷಿಸಿತ್ತು. ಅದರಂತೆ, ಈ ಬಾರಿ ಸಾರ್ವತ್ರಿಕ ವರ್ಗಾವಣೆ ಸಂದರ್ಭದಲ್ಲಿ ಉಪ ಅಧೀಕ್ಷಕರು, ಅಧೀಕ್ಷಕರು ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೊಳ್ಳಲಿದ್ದಾರೆ. ಒಟ್ಟಿನಲ್ಲಿ ಆನ್‌ಲೈನ್ ಕೌನ್ಸೆಲಿಂಗ್ ಮೂಲಕ ಒಟ್ಟು ಶೇ.85 ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ ‘ಬಿ’ ಮತ್ತು ‘ಸಿ’ ವೃಂದದ ಅಧಿಕಾರಿಗಳು, ಹಿರಿತನ ಆಧಾರದಲ್ಲಿ ವರ್ಗಾವಣೆಗೊಳ್ಳಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net