ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿ ಪಾಲಿಸಿ

ಹುಮನಾಬಾದ್​ನ ಕೃಷಿ ಇಲಾಖೆಯ ಕಚೇರಿಯಲ್ಲಿ ಬುಧವಾರ ಆಯೋಜಿಇಸದ್ದ ರಸಗೊಬ್ಬರ ವಿತರಕರ ಪೂರ್ವಸಿದ್ಧತಾ ಸಭೆಯಲ್ಲಿ ಕೃಷಿ ಇಲಾಖೆಯ ವಿಜಿಲೆನ್ಸ್​ ಅಧಿಕಾರಿ ಮಚ್ಚೇಂದ್ರನಾಥ ವಡ್ಡಿ ಮಾತನಾಡಿದರು. ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೇವಿಕಾ, ಶರಣಕುಮಾರ ಕಲ್ಯಾಣಿ, ಗೌತಮ ಇತರರಿದ್ದರು.
ಹುಮನಾಬಾದ್​ನ ಕೃಷಿ ಇಲಾಖೆಯ ಕಚೇರಿಯಲ್ಲಿ ಬುಧವಾರ ಆಯೋಜಿಇಸದ್ದ ರಸಗೊಬ್ಬರ ವಿತರಕರ ಪೂರ್ವಸಿದ್ಧತಾ ಸಭೆಯಲ್ಲಿ ಕೃಷಿ ಇಲಾಖೆಯ ವಿಜಿಲೆನ್ಸ್​ ಅಧಿಕಾರಿ ಮಚ್ಚೇಂದ್ರನಾಥ ವಡ್ಡಿ ಮಾತನಾಡಿದರು. ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ದೇವಿಕಾ, ಶರಣಕುಮಾರ ಕಲ್ಯಾಣಿ, ಗೌತಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಂಟಿ ನಿರ್ದೇಶಕಿ ದೇವಿಕಾ ಸೂಚನೆ
  • ಹುಮನಾಬಾದ್​ನಲ್ಲಿ ರಸಗೊಬ್ಬರ ವಿತರಕರ ಸಭೆ
ಹುಮನಾಬಾದ್​: ಪ್ರಸಕ್ತ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ರಸಗೊಬ್ಬರ ವಿತರಣೆ ಪ್ರಕ್ರಿಯೆಯಲ್ಲಿ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದು, ಎಲ್ಲ ರಸಗೊಬ್ಬರ ವಿತರಕರು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ ಸೂಚಿಸಿದರು.
ಪಟ್ಟಣದ ಕೃಷಿ ಇಲಾಖೆಯ ಕಚೇರಿಯಲ್ಲಿ ಬುಧವಾರ ಪ್ರಸಕ್ತ 2026&27ನೇ ಸಾಲಿನ ಮುಂಗಾರು ಹಂಗಾಮಿನ ರಸಗೊಬ್ಬರ ವಿತರಣೆ ಪೂರ್ವಸಿದ್ಧತೆ ಕುರಿತು ರಸಗೊಬ್ಬರ ವಿತರಕರ ಸಭೆಯಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಕೆ&ಕಿಸಾನ್​ ತಂತ್ರಾಂಶದ ಮೂಲಕವೇ ರೈತರಿಗೆ ರಸಗೊಬ್ಬರ ವಿತರಣೆ ಮಾಡಬೇಕು. ಹಿಂದಿನಂತೆ ವ್ಯವಹಾರ ನಡೆಸಲು ಅವಕಾಶವಿಲ್ಲ. ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಹೋಗುವುದು ಅವಶ್ಯಕ ಎಂದರು.
ಕೃಷಿ ಇಲಾಖೆಯ ವಿಜಿಲೆನ್ಸ್​ ಅಧಿಕಾರಿ ಮಚ್ಚೇಂದ್ರನಾಥ ವಡ್ಡಿ ಮಾತನಾಡಿ, ಹಿಂದಿನ ದಿನಗಳಲ್ಲಿ ರಸಗೊಬ್ಬರ ವಿತರಣೆಯಲ್ಲಿ ಹಲವು ಲೋಪದೋಷಗಳು ಕಂಡು ಬಂದ ಹಿನ್ನೆಲೆ ಸರ್ಕಾರ ಹೊಸ ವ್ಯವಸ್ಥೆ ಜಾರಿಗೆ ತಂದಿದೆ. ಇನ್ನು ಮುಂದೆ ಹೊರ ಜಿಲ್ಲೆಯ ರೈತರಿಗೆ ರಸಗೊಬ್ಬರ ವಿತರಣೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅಂಗಡಿಗಳು ಕಡ್ಡಾಯವಾಗಿ ಪ್ರತಿದಿನ ದರಪಟ್ಟಿ ಪ್ರದರ್ಶಿಸಬೇಕು. ಎಲ್ಲ ವಹಿವಾಟು ಆನ್​ಲೈನ್​ ಮೂಲಕ ನಡೆಯಬೇಕು ಹಾಗೂ ರೈತರ ಆಧಾರ್​ ವಿವರ ಪಡೆದು ರಸಗೊಬ್ಬರ ವಿತರಣೆ ಮಾಡಬೇಕು. ಯಾವುದೇ ಲೋಪದೋಷ ಕಂಡುಬಂದರೆ ಅಂಗಡಿಗಳ ಲೈಸೆನ್ಸ್​ ರದ್ದುಪಡಿಸಲಾಗುವುದು ಎಂದು ತಿಳಿಸಿದರು.
ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ಕುರಿತು ದೂರುಗಳು ಬಂದರೆ ಪರಿಶೀಲನೆ ನಡೆಸಿ ಲೈಸೆನ್ಸ್​ ಅಮಾನತು ಮಾಡಲಾಗುವುದು. ಅಂಗಡಿಗಳ ಗೋದಾಮಿನ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು. ಬೇರೆಡೆ ಅನಧಿಕೃತ ದಾಸ್ತಾನು ಪತ್ತೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಹಲವಾರು ವ್ಯಾಪಾರಸ್ಥರು ಮಾತನಾಡಿ, ಡಿಎಪಿ ರಸಗೊಬ್ಬರದ ಜತೆಗೆ ನ್ಯಾನೋ ಯೂರಿಯಾ ಸೇರಿ ಇತರೆ ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸಲು ಕಂಪನಿಗಳು ಒತ್ತಡ ಹೇರುತ್ತಿವೆ. ಇದರಿಂದ ಹೆಚ್ಚಿನ ಹೂಡಿಕೆ ಮಾಡಬೇಕಾಗುತ್ತದೆ. ಆದರೆ ರೈತರು ಕೇವಲ ರಸಗೊಬ್ಬರ ಮಾತ್ರ ಖರೀದಿಸಲು ಮುಂದಾಗುತ್ತಿರುವುದರಿಂದ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಳಲು ತೋಡಿಕೊಂಡರು.
ಹುಮನಾಬಾದ್​ ಸಹಾಯಕ ಕೃಷಿ ಅಧಿಕಾರಿ ಶರಣಕುಮಾರ ಕಲ್ಯಾಣಿ ಮಾತನಾಡಿದರು. ಬಸವಕಲ್ಯಾಣ ಸಹಾಯಕ ಕೃಷಿ ಅಧಿಕಾರಿ ಗೌತಮ, ವಿವಿಧ ಕೃಷಿ ಔಷಧ ಅಂಗಡಿಗಳ ಮಾಲೀಕರು ಹಾಗೂ ಸೊಸೈಟಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಗ್ರಾಮೀಣ ಭಾಗದಲ್ಲಿ ಸೊಸೈಟಿಗಳಿಗೆ ರಸಗೊಬ್ಬರ ವಿತರಣೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತಿದೆ. ಸೊಸೈಟಿಗಳು ಸೂಕ್ತ ಹಣ ಪಾವತಿಸಿ ದಾಸ್ತಾನು ಪಡೆದು ಸಮರ್ಪಕವಾಗಿ ವಿತರಣೆ ಮಾಡಬೇಕು. ಖಾಸಗಿ ವಿತರಕರು ಕೂಡ ಇಲಾಖೆಯೊಂದಿಗೆ ಸಹಕರಿಸಿ ರೈತರಿಗೆ ಉತ್ತಮ ಸೇವೆ ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net