ತುಮಕೂರಿನಲ್ಲಿ 2ನೇ ಏರ್‌ಪೋರ್ಟ್ ಸ್ಥಾಪಿಸಿ

ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ
ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ
Published on
ಬೆಂಗಳೂರು: ರಾಜ್ಯ ಸರ್ಕಾರದ ಉದ್ದೇಶಿತ ಅಂತಾರಾಷ್ಟ್ರೀಯ 2ನೇ ವಿಮಾನ ನಿಲ್ದಾಣವನ್ನು ತುಮಕೂರು ಜಿಲ್ಲೆ ಶಿರಾ ಬಳಿ ನಿರ್ಮಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಪತ್ರ ಬರೆದಿದ್ದಾರೆ.
2025ರ ಮಾರ್ಚ್ 20ರಂದು ತುಮಕೂರು, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾವೇರಿ ಮತ್ತು ರಾಯಚೂರು ಸೇರಿದಂತೆ ಪ್ರಮುಖ ಜಿಲ್ಲೆಗಳ ಶಾಸಕರು ಪತ್ರ ಬರೆದಿದ್ದರು. ಏಪ್ರಿಲ್ 22ರಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡುಗೆ ಪತ್ರ ಬರೆದು ಈ ಭಾಗದ ಜನಪ್ರತಿನಿಧಿಗಳ ಒತ್ತಾಸೆಯನ್ನು ಅವರ ಗಮನಕ್ಕೆ ತಂದಿದ್ದೇನೆ.
ಈಗಾಗಲೇ ಬೆಂಗಳೂರು ಕೇಂದ್ರಿತವಾಗಿ ಅಭಿವೃದ್ಧಿ ಸಾಧಿಸಿದೆ. ಬೆಂಗಳೂರಿಗೆ ಪರ್ಯಾಯ ಎಲ್ಲ ಭಾಗಗಳನ್ನು, ನಗರಗಳನ್ನು ಸಶಕ್ತವಾಗಿ ಬೆಳೆಸುವುದು ಜನಪ್ರತಿನಿಧಿಗಳ ಜವಾಬ್ದಾರಿ.ಆದರಿಂದ 2ನೇ ವಿಮಾನ ನಿಲ್ದಾಣವನ್ನು ಬೆಂಗಳೂರಿನ ಬಳಿ ನಿರ್ಮಿಸಿದರೆ, ಉತ್ತರ ಮತ್ತು ಮಧ್ಯ ಕರ್ನಾಟಕದ ಅಭಿವೃದ್ಧಿಗೆ ನ್ಯಾಯ ಸಂದಂತೆ ಆಗುವುದಿಲ್ಲ ಎಂದು ವಿ.ಸೋಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಿರಾ ಬಳಿ ನೂತನ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ಮಧ್ಯ ಕರ್ನಾಟಕ ಭಾಗ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಾಗಲಿದೆ.
ಶಿರಾದ ಸುತ್ತುಮುತ್ತ ಮುಂಬೈ ಬೆಂಗಳೂರು ಕೈಗಾರಿಕಾ ಕಾರಿಡಾರ್, ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ, ಚೆನ್ನೈ ಬೆಂಗಳೂರು ಕೈಗಾರಿಕಾ ಕಾರಿಡಾರ್ ಹಾಗೂ ಕೆಐಎಡಿಆರ್ ಕೈಗಾರಿಕಾ ಪ್ರದೇಶಗಳಿವೆ. ಎನ್‌ಎಚ್-48, ಎನ್‌ಎಚ್-69, ಎನ್‌ಎಚ್-544ಇ ಸೇರಿದಂತೆ ಹಲವು ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಹಾಗೂ ಹೊಸ ರೈಲು ಮಾರ್ಗಗಳ ಸಾರಿಗೆ ಸಂಪರ್ಕ ಜಾಲವೂ ಬಲವಾಗಿದೆ. ಹೆಚ್ಚಿನ ಪ್ರಮಾಣದ ಸರ್ಕಾರಿ ಭೂಮಿ ಲಭ್ಯವಿದ್ದು, ಭದ್ರಾ ಮೇಲ್ದಂಡೆ ಕಾಲುವೆ, ಹೇಮಾವತಿ ಮತ್ತು ಎತ್ತಿನಹೊಳೆ ಯೋಜನೆಗಳಿಂದ ನೀರಿನ ಲಭ್ಯತೆ ಜತೆಗೆ ಚಿತ್ರದುರ್ಗದ ಡಿಆರ್‌ಡಿಒ, ಐಐಎಸ್‌ಸಿ ಕ್ಯಾಂಪಸ್ ಹಾಗೂ ತುಮಕೂರಿನ ಗುಬ್ಬಿಯ ಎಚ್‌ಎಎಲ್ ಹೆಲಿಕಾಪ್ಟರ್ ಘಟಕಗಳೂ ಅತ್ಯಂತ ಸಮೀಪದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಶಿರಾ 150 ಕಿ.ಮೀಟರ್ ದೂರವಿದೆ :
ಶಿರಾ ಡಿಜಿಸಿಎಯ ನಿಯಮಕ್ಕನುಗುಣವಾಗಿ ಬೆಂಗಳೂರು ವಿಮಾನ ನಿಲ್ದಾಣದಿಂದ 150 ಕಿ.ಮೀ ದೂರವಿದೆ. ಮಧ್ಯ ಮತ್ತು ಉತ್ತರ ಕರ್ನಾಟಕದ ಜನರಿಗೆ ಅಂತಾರಾಷ್ಟ್ರೀಯ ಪ್ರಯಾಣ ಹಾಗೂ ಸರಕು ಸಾಗಣೆಗೆ ಅನುಕೂಲವಾಗಲಿದೆ. ಕೈಗಾರಿಕೆ, ಉದ್ಯೋಗ, ಹೂಡಿಕೆ ಮತ್ತು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ಸಿಗದೆಲಿ. ರಾಜ್ಯದ ಸಮತೋಲಿತ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ತುಮಕೂರಿನಲ್ಲಿ ಆದರೇ 20 ಜಿಲ್ಲೆಗೆ ಅನುಕೂಲ :
2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರಿನಲ್ಲಿ ನಿರ್ಮಾಣವಾಗಬೇಕೆಂಬ ಇಚ್ಛೆಯನ್ನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.
2ನೇ ವಿಮಾನ ನಿಲ್ದಾಣ ತುಮಕೂರಿನಲ್ಲಿ ಆಗಬೇಕೆಂದು ಬಿ.ವೈ.ವಿಜಯೇಂದ್ರ ತಮಗೆ ತಿಳಿದ ರೀತಿಯಲ್ಲಿ ಹೇಳಿದ್ದಾರೆ. 2ನೇ ವಿಮಾನ ನಿಲ್ದಾಣ ತುಮಕೂರಿಗೆ ಆಗಬೇಕೆಂದು ಮೊದಲಿನಿಂದಲೂ ಹೇಳಿದ್ದೇನೆ. ತಾಂತ್ರಿಕ ಸಮಿತಿಯು ನೆಲಮಂಗಲದ ಕುಣಿಗಲ್ ರಸ್ತೆ ಮತ್ತು ಬಿಡದಿ ಪ್ರದೇಶಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದ್ದು,ಡಿಜಿಸಿಎ ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ತುಮಕೂರಿನಲ್ಲಿ ವಿಮಾನ ನಿಲ್ದಾಣವಾದರೆ 20 ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದ್ದು, ತಾಂತ್ರಿಕವಾಗಿಯೂ ಸೂಕ್ತ ಸ್ಥಳವಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net