ಅಫಜಲಪುರ: ಪ್ರಸ್ತುತ ವರ್ಷ ಮಳೆ ಕೊರತೆಯಿಂದಾಗಿ ಅನ್ನದಾತರು ಸಂಕಷ್ಟದಲ್ಲಿದ್ದು, ಭೀಮಾ ಏತ ನೀರಾವರಿ ಮೂಲಕ ಕಾಲುವೆಗಳಿಗೆ ಹರಿಸುತ್ತಿರುವ ನೀರು ಪೋಲಾಗದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ್ ಸೂಚನೆ ನೀಡಿದರು.
ಶಿರವಾಳ - ಗೌರ (ಬಿ) ಹತ್ತಿರ ಭೀಮಾ ಏತ ನೀರಾವರಿಯ ಕಾಲುವೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಕಾಲುವೆ ಮೇಲ್ಭಾಗದಲ್ಲಿರುವ ರೈತರಿಗೆ ನೀರು ಸಿಗುವುದರ ಜತೆಗೆ ಕೆಳಭಾಗದಲ್ಲಿರುವ ರೈತರ ಜಮೀನುಗಳಿಗೂ ನೀರು ತಲುಪುವುದು ಅತ್ಯಂತ ಮುಖ್ಯವಾಗಿದೆ. ಒಬ್ಬರೇ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಳಸಿಕೊಂಡರೆ ಅದರ ಪರಿಣಾಮವಾಗಿ ಮತ್ತೊಬ್ಬ ರೈತನ ಕೃಷಿಗೆ ತೊಂದರೆ ಆಗುತ್ತದೆ. ಹೀಗಾಗಿ ಎಲ್ಲರೂ ಸಮರ್ಪಕವಾಗಿ ಬಳಸಿಕೊಳ್ಳಬೇಕು. ರೈತರ ನಡುವೆ ಅನಗತ್ಯ ಗೊಂದಲ ಉಂಟಾಗದಂತೆ ಅಧಿಕಾರಿಗಳು ಸಮನ್ವಯ ಸಾಧಿಸಬೇಕು ಎಂದರು.