ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್​ಶಿಫ್ ಅಥಾರಿಟಿ ಸಾರ್ವಜನಿಕ ಪ್ರಾಧಿಕಾರ: RTI ಅಡಿ ಮಾಹಿತಿ ನೀಡಲು ಆಯುಕ್ತರ ಆದೇಶ

ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ
ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ
Published on
ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್​ಶಿಫ್ ಅಥಾರಿಟಿ ಸರ್ಕಾರದ ಸಾರ್ವಜನಿಕ ಪ್ರಾಧಿಕಾರವಾಗಿದ್ದು, ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಸಂಪರ್ಕ ಅಧಿಕಾರಿಗಳನ್ನು ನೇಮಿಸಿ ಸಾರ್ವಜನಿಕ ಅರ್ಜಿದಾರರಿಗೆ ಮಾಹಿತಿ ನೀಡಬೇಕು ಎಂದು ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಆದೇಶಿಸಿದ್ದಾರೆ.
ಗಣೇಶ್ ಕುಮಾರ್ ಎಂಬ ಆರ್​ಟಿಐ ಕಾರ್ಯಕರ್ತ ಸಲ್ಲಿಸಿದ ಅರ್ಜಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಮತ್ತು ಪ್ರತಿವಾದಿಗಳ ಹೇಳಿಕೆ ದಾಖಲಿಸಿಕೊಂಡು ವಿಚಾರಣೆ ನಡೆಸಿರುವ ಆಯುಕ್ತರು, 1970ರಲ್ಲಿ ಎಲೆಕ್ಟ್ರಾನಿಕ್ ಸಿಟಿಯನ್ನು ಉದ್ಯಮಗಳನ್ನು ಬೆಳೆಸಲು ರಾಜ್ಯ ಸರ್ಕಾರ ನಿರ್ಮಿಸಿದ್ದು, ಸರ್ಕಾರದ ಕಿಯೋನಿಕ್ಸ್​ ಸಂಸ್ಥೆ ಅದನ್ನು ಅಭಿವೃದ್ಧಿ ಪಡಿಸಿದೆ.
ಮುಂದೆ 1997ರಲ್ಲಿ ಕಿಯೋನಿಕ್ಸ್ ಸಂಸ್ಥೆಯು ಅದನ್ನು ನಿರ್ವಹಣೆ ಮಾಡಲು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್​ಶಿಫ್ ಅಥಾರಿಟಿಗೆ ವಹಿಸಿದೆ. ಇದು ಕರ್ನಾಟಕ ಪುರಸಭೆ ಕಾಯ್ದೆ 1964ರ ಸೆಕ್ಷನ್ 364-ಎ ಅಡಿಯಲ್ಲಿ ರೂಪಗೊಂಡು ಶಾಸನಬದ್ದ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. 2010ರ ಸರ್ಕಾರದ ಅಧಿಸೂಚನೆಯಂತೆ ಪ್ರಾಧಿಕಾರ ರಸ್ತೆ, ನೀರು, ನೈರ್ಮಲ್ಯದಂತ ಸಾರ್ವಜನಿಕ ಸಂಸ್ಥೆಗಳನ್ನು ನೀಡುವ ಜವಾಬ್ದಾರಿ ಸಂಸ್ಥೆಯಾಗಿದೆ.
ಸರ್ಕಾರದ ಅಧಿಸೂಚನೆ ಸಂಖ್ಯೆ 292724 ಡಿಎಂಎ/ಡಿವಿಎ/ ಟ್ಯಾಕ್ಸ್/3/2020 ದಿನಾಂಕ 19-02-2021ರ ಆದೇಶದ ಪ್ರಕಾರ ತೆರಿಗೆಯನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್​ಶಿಫ್ ಅಥಾರಿಟಿ ಮಾಡುತ್ತಿದೆ. ತನ್ನ ಪ್ರದೇಶ ವ್ಯಾಪ್ತಿಯಲ್ಲಿ ಸರ್ಕಾರ ನಿಗದಿ ಮಾಡಿದ ಬೆಲೆಯಲ್ಲಿ ನಿವೇಶನ, ಕಟ್ಟಡದಿಂದ ತೆರಿಗೆ ವಸೂಲಿ ಮಾಡುತ್ತಿದೆ.
ಸಂಸತ್ತು, ರಾಜ್ಯ ವಿಧಾನಮಂಡಲದಲ್ಲಿ ರಚನೆಯಾದ ಕಾನೂನು ಮತ್ತು ಸರ್ಕಾರದ ಅಧಿಸೂಚನೆ ಪ್ರಕಾರ ರಚನೆಯಾದ ಯಾವುದೇ ಪ್ರಾಧಿಕಾರ ಮಾಹಿತಿ ಹಕ್ಕು ಕಾಯ್ದೆ 2(ಹೆಚ್​) ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರಗಳಾಗುತ್ತವೆ. ಅದೇ ರೀತಿ ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್​ಶಿಫ್ ಅಥಾರಿಟಿ ಸರ್ಕಾರದ ಸಾರ್ವಜನಿಕ ಪ್ರಾಧಿಕಾರವಾಗಿದೆ.
ಪ್ರಾಧಿಕಾರದಲ್ಲಿ ಚುನಾಯಿತ ಮಂಡಳಿಯಿಲ್ಲದಿದ್ದರೂ, ಸರ್ಕಾರದಿಂದ ನೇಮಕಗೊಂಡ ಸದಸ್ಯರಿದ್ದಾರೆ. ಸರ್ಕಾರವೇ ರಚನೆ ಮಾಡಿದ ಮಂಡಳಿಯಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್​ಶಿಫ್ ಅಥಾರಿಟಿ ವ್ಯಾಪ್ತಿಯಲ್ಲಿರುವ ಭೂಮಿ ಸರ್ಕಾರದ ಅಧಿಕಾರದ ವ್ಯಾಪ್ತಿಗೆ ಒಳಪಡುತ್ತದೆ. ಹೀಗಾಗಿ ಪ್ರಾಧಿಕಾರವು ಮಾಹಿತಿ ಹಕ್ಕು ಕಾಯ್ದೆ 2005ರ 2(ಹೆಚ್​) ಪ್ರಕಾರ ಸಾರ್ವಜನಿಕ ಪ್ರಾಧಿಕಾರ ವ್ಯಾಪ್ತಿಗಳಿಗೆ ಒಳಪಡುತ್ತದೆ.
ಈ ಹಿನ್ನೆಲೆ ಮಾಹಿತಿ ಹಕ್ಕು ಕಾಯ್ದೆಯ ಕಲಂ 5(1) ಅಡಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ, ಕಲಂ 5(2) ಅಡಿಯಲ್ಲಿ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಕಲಂ 19ರ ಪ್ರಕಾರ ಪ್ರಥಮ ಮೇಲ್ಮನವಿ ಪ್ರಾಧಿಕಾರಿಯನ್ನು ನೇಮಿಸಿ, ಅರ್ಜಿದಾರರ ಕೋರಿರುವ ಮಾಹಿತಿಯನ್ನು ಒದಗಿಸಬೇಕು. ತಪ್ಪಿದ್ದಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಶಿಸ್ತುಕ್ರಮಕ್ಕೆ ಸೂಚಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಗಣೇಶ್ ಕುಮಾರ್ ಎಂಬ ಆರ್​ಟಿಐ ಕಾರ್ಯಕರ್ತ ಪ್ರಾಧಿಕಾರದ ಕಾಮಗಾರಿ, ತೆರಿಗೆ, ಟೆಂಡರ್​ಗೆ ಸಂಬಂಧಿಸಿದ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಾಧಿಕಾರವು ಇದು ಸಾರ್ವಜನಿಕ ಪ್ರಾಧಿಕಾರವಲ್ಲ ಎಂದು ವಾದಿಸಿ ಅರ್ಜಿಯನ್ನು ತಿರಸ್ಕರಿಸಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net