ಸಂಪಾದಕೀಯ: ಜಲಜಾಗೃತಿ ಅನಿವಾರ್ಯ

ಸಂಪಾದಕೀಯ: ಜಲಜಾಗೃತಿ ಅನಿವಾರ್ಯ
ಸಂಪಾದಕೀಯ: ಜಲಜಾಗೃತಿ ಅನಿವಾರ್ಯ
Published on
ಸಂಪಾದಕೀಯ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಶಿರಾಲಿಯ ಕಳಿನಟ್ಟಿ ಹೊಳೆಯಲ್ಲಿ ಕಪ್ಪೆಚಿಪ್ಪು ಆರಿಸಲು ಹೋದ 10 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟ ದುರಂತ ಅತ್ಯಂತ ಆಘಾತಕಾರಿ ಮತ್ತು ಕರುಣಾಜನಕವಾಗಿದೆ. ಮಳೆಯ ಕಾರಣದಿಂದ ನದಿಯಲ್ಲಿ ಹೆಚ್ಚಿದ್ದ ನೀರಿನ ಹರಿವು ಮತ್ತು ಸಮುದ್ರದ ಅಲೆಗಳ ಅಬ್ಬರದಿಂದಾಗಿ ನೀರಿನ ಮಟ್ಟ ದಿಢೀರನೆ ಏರಿದ್ದು ಈ ದುರಂತಕ್ಕೆ ಕಾರಣವಾಗಿದೆ. ಬದುಕಿಗಾಗಿ ನದಿಯನ್ನೇ ನಂಬಿದ್ದ ಮುಗ್ಧ ಜೀವಿಗಳು ಹೀಗೆ ಜಲಸಮಾಧಿಯಾಗಿರುವುದು ಇಡೀ ನಾಡನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಈ ಘಟನೆಯನ್ನು ಒಂದು ಆಕಸ್ಮಿಕವೆಂದು ತಳ್ಳಿಹಾಕುವಂತಿಲ್ಲ. ಇದು ಕರಾವಳಿ ತೀರದ ನಿರಂತರ ಬದಲಾವಣೆಗಳನ್ನು ಸರಿಯಾಗಿ ಗ್ರಹಿಸದ ಇಂದಿನ ವ್ಯವಸ್ಥೆ ಹಾಗೂ ಸಾರ್ವಜನಿಕರಲ್ಲಿ ಇರಬೇಕಾದ ಮುನ್ನೆಚ್ಚರಿಕೆಯ ಕೊರತೆಗೆ ಹಿಡಿದ ಕೈಗನ್ನಡಿಯಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ನದಿ ಮತ್ತು ಸಮುದ್ರದ ಸಂಗಮ ಸ್ಥಾನಗಳು ಅತ್ಯಂತ ಅಪಾಯಕಾರಿ ವಲಯಗಳಾಗಿರುತ್ತವೆ. ಮಳೆಗಾಲದ ಆರಂಭದಲ್ಲಿ ಅಥವಾ ಹವಾಮಾನ ವೈಪರೀತ್ಯ ಉಂಟಾದಾಗ ಈ ಜಲಮೂಲಗಳ ಒಳಹರಿವು ಮತ್ತು ಉಬ್ಬರವಿಳಿತಗಳ ಸ್ವರೂಪ ಅತ್ಯಂತ ವೇಗವಾಗಿ ಬದಲಾಗುತ್ತದೆ. ಮೇಲ್ನೋಟಕ್ಕೆ ಶಾಂತವಾಗಿ ಕಾಣುವ ನದಿ ಒಡಲು, ಕ್ಷಣಾರ್ಧದಲ್ಲಿ ರೌದ್ರರೂಪ ತಳೆಯಬಲ್ಲದು ಎಂಬುದನ್ನು ಕಳಿನಟ್ಟಿ ಹೊಳೆಯ ದುರಂತ ಸಾಬೀತುಪಡಿಸಿದೆ. ಕಪ್ಪೆಚಿಪ್ಪು ಆರಿಸುವುದು, ಮೀನುಗಾರಿಕೆ ಅಥವಾ ದೈನಂದಿನ ಜೀವನೋಪಾಯಕ್ಕಾಗಿ ಇಂತಹ ಜಲಮೂಲಗಳನ್ನೇ ಆಶ್ರಯಿಸಿರುವ ಜನರಿಗೆ ನೀರಿನ ಆಳ, ಪ್ರವಾಹದ ವೇಗ ಮತ್ತು ಉಬ್ಬರದ ಸಮಯದ ನಿಖರವಾದ ಮುನ್ಸೂಚನೆ ಸಿಗದೇ ಹೋದರೆ ಇಂತಹ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಹೀಗಾಗಿ, ನದಿ ಹಾಗೂ ಸಮುದ್ರ ತೀರದ ಜನರಲ್ಲಿ ಪ್ರಾಕೃತಿಕ ಬದಲಾವಣೆಗಳ ಕುರಿತು ಇರಬೇಕಾದ ಮುನ್ನೆಚ್ಚರಿಕೆಯ ಅಗತ್ಯವನ್ನು ಈ ಘಟನೆ ನೆನಪಿಸುತ್ತದೆ.
ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತದ ಜವಾಬ್ದಾರಿ ಮತ್ತು ಕಾರ್ಯಾಚರಣೆ ಅತ್ಯಂತ ಜರೂರಾಗಿದೆ. ದುರಂತ ನಡೆದ ನಂತರ ಪರಿಹಾರ ಘೋಷಿಸುವುದರಿಂದ ಅಥವಾ ಸಂತಾಪ ಸೂಚಿಸುವುದರಿಂದ ಅಮೂಲ್ಯ ಜೀವಗಳನ್ನು ಮರಳಿ ತರಲು ಸಾಧ್ಯವಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಆಡಳಿತಗಳು ಜಲಮೂಲಗಳ ಸಮೀಪವಿರುವ ಅಪಾಯಕಾರಿ ವಲಯಗಳನ್ನು ಗುರುತಿಸಿ, ಅಲ್ಲಿ ಸೂಕ್ತ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಹವಾಮಾನ ಇಲಾಖೆ ನೀಡುವ ಮುನ್ಸೂಚನೆಗಳನ್ನು ಸ್ಥಳೀಯ ಭಾಷೆಯಲ್ಲಿ ಗ್ರಾಮೀಣ ಮಟ್ಟದವರೆಗೂ ತಲುಪಿಸುವ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪುಗೊಳ್ಳಬೇಕು. ಕರಾವಳಿ ಕಾವಲು ಪಡೆ ಮತ್ತು ಮುಳುಗು ತಜ್ಞರ ತಂಡಗಳು ಸದಾ ಸನ್ನದ್ಧ ಸ್ಥಿತಿಯಲ್ಲಿದ್ದರೆ, ಇಂತಹ ತುರ್ತು ಸಂದರ್ಭಗಳಲ್ಲಿ ತಕ್ಷಣದ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಅನುಕೂಲವಾಗುತ್ತದೆ.
ಸಾರ್ವಜನಿಕ ಹೊಣೆಗಾರಿಕೆಯೂ ಇಲ್ಲಿ ಅಷ್ಟೇ ಮುಖ್ಯವಾಗುತ್ತದೆ. ಸ್ಥಳೀಯರು ಹವಾಮಾನ ವೈಪರೀತ್ಯದ ಸಮಯದಲ್ಲಿ ತೀವ್ರ ಜಾಗ್ರತೆ ವಹಿಸಬೇಕು. ಸುರಿಯುವ ಮಳೆಯ ನಡುವೆ, ನದಿಯ ಒಳಹರಿವಿನ ತೀವ್ರತೆಯನ್ನು ಅರಿಯದೆ ನೀರಿನಲ್ಲಿ ಇಳಿಯುವುದು ಸರಿಯಲ್ಲ. ಶಾಲೆ-ಕಾಲೇಜುಗಳಲ್ಲಿ ಮತ್ತು ಸ್ಥಳೀಯ ಸಂಘ-ಸಂಸ್ಥೆಗಳ ಮೂಲಕ ಈ ಕುರಿತು ಮೂಲಭೂತ ಪಾಠಗಳನ್ನು ಕಲಿಸಬೇಕಾದ ಅಗತ್ಯವಿದೆ. ಇನ್ನು ಮುಂದೆಯಾದರೂ ಇಂತಹ ಕರುಣಾಜನಕ ದುರಂತಗಳು ಮರುಕಳಿಸದಂತೆ ತಡೆಯಲು ಸಮಗ್ರ ಜಲಜಾಗೃತಿ ಮತ್ತು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳು ಕಡ್ಡಾಯವಾಗಬೇಕಿದೆ. ಜಲಮೂಲಗಳ ಒಡನಾಟದಲ್ಲಿ ಶಿಸ್ತು ಬೆಳೆಸಿಕೊಳ್ಳಬೇಕಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net