ಸಂಪಾದಕೀಯ: ರೈತರಿಗೆ ನೆರವು ಅಗತ್ಯ

ಸಂಪಾದಕೀಯ: ರೈತರಿಗೆ ನೆರವು ಅಗತ್ಯ
ಸಂಪಾದಕೀಯ: ರೈತರಿಗೆ ನೆರವು ಅಗತ್ಯ
Published on
ಸಂಪಾದಕೀಯ: ರಾಜ್ಯದಲ್ಲಿ ಮುಂಗಾರು ಮಾರುತಗಳು ನಿರೀಕ್ಷಿತ ಮಟ್ಟದಲ್ಲಿ ಚುರುಕಾಗದ ಹಿನ್ನೆಲೆಯಲ್ಲಿ, ಜೂನ್​ ತಿಂಗಳಿನಲ್ಲಿ ಶೇಕಡ 45ರಷ್ಟು ಮಳೆ ಕುಂಠಿತಗೊಂಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಅನ್ನದಾತನ ಬದುಕಿಗೆ ಆಧಾರವಾಗಬೇಕಿದ್ದ ಮುಂಗಾರು ಆರಂಭದಲ್ಲೆ ಕೈಕೊಟ್ಟಿರುವುದು ಗ್ರಾಮೀಣ ಭಾಗದ ಆರ್ಥಿಕತೆಗೆ ಪೆಟ್ಟು ನೀಡಿದೆ. ಮುಂಗಾರು ಮಳೆಯನ್ನೇ ನಂಬಿ ಜಮೀನು ಹದ ಮಾಡಿ ಕಾಯುತ್ತಿದ್ದ ರೈತರು, ಈಗ ಬಿತ್ತನೆ ಕಾರ್ಯವನ್ನೂ ಆರಂಭಿಸಲಾಗದೆ ಮುಂದೇನು ಮಾಡಬೇಕೆಂದು ದಿಕ್ಕುತೋಚದ ಸ್ಥಿತಿಯಲ್ಲಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಬರಗಾಲದ ಕರಾಳ ಛಾಯೆ ಆವರಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಇಂತಹ ಅತ್ಯಂತ ಕಠಿಣ ಹಾಗೂ ತುರ್ತು ಸಂದರ್ಭದಲ್ಲಿ ಕೃಷಿ ಇಲಾಖೆ ಮತ್ತು ಸರ್ಕಾರ ರೈತರ ನೆರವಿಗೆ ಧಾವಿಸಬೇಕಾದ ಅನಿವಾರ್ಯತೆ ಇದೆ. ಮಳೆಯ ಅಭಾವದಿಂದಾಗಿ ಕಂಗಾಲಾಗಿರುವ ರೈತರಲ್ಲಿ ಮೊದಲಿಗೆ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕಿದೆ. ಇದಕ್ಕಾಗಿ ಕೃಷಿ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತವಾಗಿ, ಪ್ರತಿ ಹಳ್ಳಿಯ ಮಟ್ಟದಲ್ಲೂ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವ ಅಭಿಯಾನವನ್ನು ಹಮ್ಮಿಕೊಳ್ಳಬೇಕು.
ಪ್ರಸಕ್ತ ಸನ್ನಿವೇಶದಲ್ಲಿ ಸಾಂಪ್ರದಾಯಿಕ ಮತ್ತು ಹೆಚ್ಚು ನೀರು ಬೇಡುವ ಬೆಳೆಗಳತ್ತ ಮುಖ ಮಾಡಿದರೆ ನಷ್ಟ ಖಚಿತ. ಕಡಿಮೆ ನೀರಿನಲ್ಲಿ, ಅಲ್ಪಾವಧಿಯಲ್ಲಿ ಕೈಗೆ ಬರುವ ಪರ್ಯಾಯ ಬೆಳೆಗಳನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸಬೇಕಾಗಿದೆ. ಬರ ನಿರೋಧಕ ಬೆಳೆಗಳಾದ ರಾಗಿ, ನವಣೆ, ಸಾಮೆ ಮುಂತಾದ ಸಿರಿಧಾನ್ಯಗಳು ಹಾಗೂ ಕಡಿಮೆ ನೀರು ಬಳಸುವ ದ್ವಿದಳ ಧಾನ್ಯಗಳ ಬಿತ್ತನೆಗೆ ರೈತರನ್ನು ಪ್ರೇರೇಪಿಸಬೇಕು. ಕೃಷಿ ಇಲಾಖೆ ರಿಯಾಯಿತಿ ದರದಲ್ಲಿ ಪರ್ಯಾಯ ಬೆಳೆಗಳ ಗುಣಮಟ್ಟದ ಬಿತ್ತನೆ ಬೀಜಗಳನ್ನು ಮತ್ತು ರಸಗೊಬ್ಬರಗಳನ್ನು ಸಕಾಲದಲ್ಲಿ ರೈತರ ಕೈಸೇರುವಂತೆ ವ್ಯವಸ್ಥೆ ಮಾಡಬೇಕು. ಮಣ್ಣಿನ ತೇವಾಂಶ ಸಂರಕ್ಷಣೆ ಮತ್ತು ಲಭ್ಯವಿರುವ ಅತ್ಯಲ್ಪ ನೀರನ್ನು ಮಿತವಾಗಿ ಬಳಸುವ ಹನಿ ನೀರಾವರಿ ಪದ್ಧತಿಗಳ ಬಗ್ಗೆ ರೈತರಿಗೆ ಕೃಷಿ ವಿಜ್ಞಾನಿಗಳಿಂದ ತಾಂತ್ರಿಕ ಸಲಹೆಗಳನ್ನು ಕೊಡಿಸಬೇಕು.
ಮಳೆಯ ಅನಿಶ್ಚಿತತೆಯಿಂದ ಉಂಟಾಗುವ ನಷ್ಟದಿಂದ ರೈತರನ್ನು ರಕ್ಷಿಸಲು ಇರುವ ಪ್ರಮುಖ ಅಸ್ತ್ರವೆಂದರೆ ಬೆಳೆ ವಿಮೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಕೃಷಿ ಇಲಾಖೆ ಬೆಳೆವಿಮೆ ಅಭಿಯಾನವನ್ನು ಯುದ್ಧೋಪಾದಿಯಲ್ಲಿ ತೀವ್ರಗೊಳಿಸಬೇಕಾಗಿದೆ. ವಿಮೆ ನೋಂದಣಿಯ ಅವಧಿಯನ್ನು ವಿಸ್ತರಿಸುವುದು ಮತ್ತು ಪ್ರಕ್ರಿಯೆಯನ್ನು ಸರಳಗೊಳಿಸುವುದು ಇಂದಿನ ಅಗತ್ಯ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತರಿಗೆ ವಿಮೆ ಮಾಡಿಸುವ ಕುರಿತು ಜಾಗೃತಿ ಮೂಡಿಸಿ, ಯಾವುದೇ ಅರ್ಹ ರೈತರು ಈ ರಕ್ಷಣಾ ಕವಚದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು ರೈತರಿಗೆ ತೊಂದರೆ ನೀಡದಂತೆ ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕಿದೆ.
ಬರಗಾಲ ಎದುರಾದಾಗ ಕೃಷಿಯಷ್ಟೇ ಅಲ್ಲದೆ, ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ಸಮಸ್ಯೆ ಕೂಡ ಬೃಹದಾಕಾರವಾಗಿ ಬೆಳೆಯುತ್ತದೆ. ಆದ್ದರಿಂದ ಸರ್ಕಾರ ಈಗಿನಿಂದಲೇ ಮೇವಿನ ಬ್ಯಾಂಕುಗಳನ್ನು ಸ್ಥಾಪಿಸಲು ಮತ್ತು ಕುಡಿಯುವ ನೀರಿನ ಪೂರೈಕೆಗೆ ಪರ್ಯಾಯ ಯೋಜನೆಗಳನ್ನು ರೂಪಿಸಲು ಮುಂದಾಗಬೇಕು. ಸರ್ಕಾರ ಬರಗಾಲದಿಂದ ಸೃಷ್ಟಿಯಾಗುವ ಸವಾಲುಗಳನ್ನು ಎದುರಿಸಲು ತಕ್ಷಣವೇ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ಸೂಕ್ತ ಕಾರ್ಯಯೋಜನೆಯನ್ನು ಜಾರಿಗೆ ತರಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net