ಡ್ರಗ್ಸ್ ಎಂಬ ವಿಷ ಅದನ್ನು ಸೇವಿಸುವ ವ್ಯಕ್ತಿಯನ್ನಷ್ಟೇ ಅಲ್ಲ, ಇಡೀ ಸಮಾಜವನ್ನೇ ನಾಶಪಡಿಸುತ್ತದೆ. ಸಿಂಥೆಟಿಕ್ ಡ್ರಗ್ಗಳಾದ ಎಂಡಿಎಂಎ ಅಥವಾ ಮೆಫೆಡ್ರೋನ್ ಸೇವನೆಯಿಂದ ಮಿದುಳಿನ ಮೇಲೆ ದುಷ್ಪರಿಣಾಮ ಆಗುತ್ತದೆ. ಕಿಡ್ನಿ ವೈಫಲ್ಯ, ಹೃದಯಾಘಾತ, ಮಾನಸಿಕ ಅಸ್ವಸ್ಥತೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಬದುಕು ಹಳಿ ತಪ್ಪುತ್ತದೆ. ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುವುದಕ್ಕೂ ಇದು ಪರೋಕ್ಷವಾಗಿ ಕಾರಣವಾಗುತ್ತದೆ. ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಡ್ರಗ್ಸ್ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆದಿರುವುದು ಶ್ಲಾಘನೀಯ. ಪಾರ್ಟಿಗಳಲ್ಲಿ ಯುವಜನರಿಗೆ ಹಂಚಲು ಸಿದ್ಧವಾಗುತ್ತಿದ್ದ ಕೋಟ್ಯಂತರ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ಜಪ್ತಿ ಮಾಡುವ ಮೂಲಕ ಪೊಲೀಸರು ಅನಾಹುತವನ್ನು ತಪ್ಪಿಸಿದ್ದಾರೆ.