1956ರ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯ ನಂತರ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಯಿತು. ಆದರೆ, ಬೆಳಗಾವಿ ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳು ತನಗೆ ಸೇರಬೇಕೆಂದು ಮಹಾರಾಷ್ಟ್ರ ವಾದಿಸುತ್ತಿದೆ. ಕೇಂದ್ರ ಸರ್ಕಾರ ನೇಮಿಸಿದ ಮಹಾಜನ್ ಸಮಿತಿಯು ಬೆಳಗಾವಿಯನ್ನು ಕರ್ನಾ0ಟಕದಲ್ಲೆ ಉಳಿಸಬೇಕು ಎಂದು 1966ರಲ್ಲಿಯೇ ಸ್ಪಷ್ಟವಾಗಿ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು. ಆದರೂ, ಮಹಾರಾಷ್ಟ್ರ ಈ ವರದಿಯನ್ನು ತಿರಸ್ಕರಿಸಿ 2004ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ಮುಂದಿನ ತಿಂಗಳು ಸುಪ್ರೀಂ ಕೋರ್ಟ್ನಲ್ಲಿ ಬೆಳಗಾವಿ ಗಡಿ ವಿವಾದದ ವಿಚಾರಣೆ ನಡೆಯಲಿದೆ. "ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಪ್ರಾಬಲ್ಯವಿದ್ದು ಅಲ್ಲಿ ತಮ್ಮ ಸಾಂಸ್ಕೃತಿಕ ಕೇಂದ್ರವೂ ಇದೆ' ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸುವುದು ಮಹಾರಾಷ್ಟ್ರದ ಕುತಂತ್ರ. ಈ ಭವನ ನಿರ್ಮಿಸುವ ಮೂಲಕ ಬೆಳಗಾವಿಯ ಜನರನ್ನು ಮರಾಠಿಗರೆಂದು ಬಿಂಬಿಸಿ, ಭಾಷಾ ಸಂಘರ್ಷವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಮಹಾರಾಷ್ಟ್ರದ ನಾಯಕರ ಮುಖ್ಯ ಗುರಿ. ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಗಡಿ ಭಾಗದ ಮರಾಠಿ ಶಾಲೆಗಳು ಮತ್ತು ಸಂಸ್ಥೆಗಳಿಗೆ ಈಗಾಗಲೇ ಕೋಟ್ಯಂತರ ರೂ. ಅನುದಾನ ನೀಡುತ್ತ ಬಂದಿದೆ. ಈಗ ಭವನದ ಮೂಲಕ ತನ್ನ ಅನಪೇಕ್ಷಿತ ಹಸ್ತಕ್ಷೇಪವನ್ನು ಕಾನೂನುಬದ್ಧಗೊಳಿಸಲು ಯತ್ನಿಸುತ್ತಿದೆ.