ರಾಜಧಾನಿಗೆ ಆರ್ಥಿಕ ಮಾಸ್ಟರ್‌ಪ್ಲಾನ್

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮುಖದಲ್ಲಿ ಐಎಸ್‌ಇಜಿ ಮತ್ತು ಸರ್ಕಾರ ಒಪ್ಪಂದಕ್ಕೆ ಸಹಿ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮುಖದಲ್ಲಿ ಐಎಸ್‌ಇಜಿ ಮತ್ತು ಸರ್ಕಾರ ಒಪ್ಪಂದಕ್ಕೆ ಸಹಿ
Published on
ಬೆಂಗಳೂರು: ಬೆಂಗಳೂರು ಮಹಾನಗರ ಪ್ರದೇಶಕ್ಕೆ ಸಮಗ್ರ ಆರ್ಥಿಕ ಮಾಸ್ಟರ್‌ಪ್ಲಾನ್ ಅಭಿವೃದ್ಧಿಪಡಿಸಲು
ಲಾಭರಹಿತ ಸಂಸ್ಥೆ ಸುಸ್ಥಿರ,ಉದ್ಯೋಗ ಮತ್ತು ಅಭಿವೃದ್ಧಿ ದತ್ತಿ (ಐಎಸ್‌ಇಜಿ)ನೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿತು.
ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮುಖದಲ್ಲಿ ಐಎಸ್‌ಇಜಿ ಮತ್ತು ಸರ್ಕಾರ ಒಪ್ಪಂದಕ್ಕೆ ಸಹಿ ಮಾಡಲಾಯಿತು. ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಜಧಾನಿ ಬೆಂಗಳೂರು ನಿರ್ಮಾಣವಾಗಿ 500 ವರ್ಷವಾಗುವ 2037ರ ಹೊತ್ತಿಗೆ ವಿಶ್ವದರ್ಜೆಯ ನಗರವಾಗಿಸುವ ನಿಟ್ಟಿನಲ್ಲಿ ಪ್ರಯತ್ನದಲ್ಲಿದ್ದೇವೆ.
ಈ ಸಲುವಾಗಿ ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶದ (ಬಿಎಂಆರ್‌ಡಿಎ) ಪ್ರದೇಶವನ್ನೂ ಒಳಗೊಂಡಂತೆ ಆರ್ಥಿಕ ಮಹಾ ಯೋಜನೆಯನ್ನು (ಮಾಸ್ಟರ್ ಪ್ಲ್ಯಾನ್) ರೂಪಿಸುವ ಕುರಿತು ಐಎಸ್‌ಇಜಿ ಜೊತೆಗೆ ಒಪ್ಪಂದಕ್ಕೆ ಸಹಿ ಮಾಡಲಾಯಿತು.
ಬೆಂಗಳೂರಿನಲ್ಲಿ ವಿಶ್ವದರ್ಜೆ ಪ್ರಗತಿ ಹಬ್ ಮಾಡಲು ಕಳೆದ 3 ವರ್ಷಗಳಿಂದ ಪ್ರಯತ್ನ ಮಾಡುತ್ತಲೇ ಇದ್ದೇವೆ. ಬೆಂಗಳೂರು ಮಹಾನಗರ ಪ್ರದೇಶದ ಬೆಳವಣಿಗೆಯ ಪಥಕ್ಕಾಗಿ ಮಹತ್ಪಾಕಾಂಕ್ಷೆ, ಡೇಟಾ ಆಧಾರಿತ ಮತ್ತು ಕ್ರಿಯಾತ್ಮಕ ದೃಷ್ಟಿಕೋನವನ್ನು ಆರ್ಥಿಕ ಮಾಸ್ಟರ್‌ಪ್ಲಾನ್‌ನಲ್ಲಿ ಇರಲಿದೆ. ಆರ್ಥಿಕತೆ, ಜೀವನ ಗುಣಮಟ್ಟ ಮೂಲಸೌಕರ್ಯ ಮತ್ತು ಸುಸ್ಥಿರತೆಯನ್ನು ಒಳಗೊಂಡಿರಲಿದೆ.
ಬೆಂಗಳೂರು ಮಹಾನಗರ ಪ್ರದೇಶವು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ 8 ಸಾವಿರ ಚದರ ಕಿ.ಮೀ ಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ಹರಡಿದೆ. 1.6 ಕೋಟಿ ಜನಸಂಖ್ಯೆ ಹೊಂದಿದೆ. ಬೆಂಗಳೂರು ಮಹಾನಗರ ಪ್ರದೇಶವು ಕರ್ನಾಟಕದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಎಸ್‌ಡಿಪಿ) ಶೇ.43 ಹೆಚ್ಚು ಕೊಡುಗೆ ನೀಡುತ್ತದೆ.
ಭಾರತದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ, ಜಾಗತಿಕ ಸಾಮರ್ಥ್ಯ ಕೇಂದ್ರಗಳು, ಏರೋಸ್ಪೇಸ್ ಮತ್ತು ಜೈವಿಕ ತಂತ್ರಜ್ಞಾನ ಚಟುವಟಿಕೆಗಳ ತವರಾಗಿದೆ. ಇಲ್ಲಿನ ತಲಾ ಆದಾಯ 8.42 ಲಕ್ಷ ರೂ. ರಾಜ್ಯದ ಸರಾಸರಿಗಿಂತ ಬಹುತೇಕ ಎರಡು ಪಟ್ಟು ಇರುತ್ತದೆ. ಭಾರತದ ಸ್‌ಟಾವೇರ್ ರಫ್ತಿನ ಶೇ.42 ಬೆಂಗಳೂರು ಒದಗಿಸುತ್ತಿದೆ. 875ಕ್ಕಿಂತ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಹೊಂದಿದೆ.
ಆದರಿಂದ ಆರ್ಥಿಕ ಮಾಸ್ಟರ್‌ಪ್ಲಾನ್ ಅನ್ನು ರೂಪಿಸಲು ಚಿಂತನೆ ನಡೆಸಿದ್ದೇವೆ. ಎಲ್ಲಿ ಉದ್ಯೋಗ ಸೃಷ್ಟಿಸಬೇಕು, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು, ಎಲ್ಲಿ ವಸತಿ ಯೋಜನೆಗಳನ್ನು ತರಬೇಕು, ಸಂಚಾರ ದಟ್ಟಣೆ ನಿವಾರಣೆಗೆ ಸಂಬಂಧಿಸಿದಂತೆ ನಕ್ಷ ರೂಪಿಸಲಾಗುವುದು. ಸಮಸ್ಯೆಗೆ ಪರಿಹಾರ ಯಾವ ರೀತಿ ನೀಡಬೇಕು ಎಂಬ ಯೋಜನೆ ರೂಪಿಸಲಿದ್ದೇವೆ. 2 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಯನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುತ್ತಿದ್ದೇವೆ ಎಂಡು ಡಿಸಿಎಂ ತಿಳಿಸಿದರು.
ವರದಿ ನೀಡುವ ಕುರಿತ ಒಡಂಬಡಿಕೆಗೆ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಐಎಸ್‌ಇಜಿ ನಿರ್ದೇಶಕ ಡಾ. ಶಿರೀಶ್ ಸಂಖೆ ಸಹಿ ಮಾಡಿದರು. ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ವಿವಿಧ ಇಲಾಖೆಗಳ ಅಧಿಕಾರಿಗಳು, ನಗರ ಯೋಜನಾ ತಜ್ಞರಾದ ರವಿಚಂದರ್, ಆರ್.ಕೆ. ಮಿಶ್ರಾ ಮತ್ತಿತರರಿದ್ದರು.

ದತ್ತಾಂಶ ಆಧಾರಿತ ನಕ್ಷೆ :

ದತ್ತಾಂಶ ಆಧಾರಿತ ಆರ್ಥಿಕ ಮಾಸ್ಟರ್‌ಪ್ಲಾನ್ ರೂಪಿಸಲು ಐಎಸ್‌ಇಜಿ ಸಂಸ್ಥೆಗೆ ಸೂಚಿಸಲಾಗಿದೆ. ಸರ್ಕಾರಕ್ಕೆ ಆರ್ಥಿಕ ಹೊರೆ ಇರುವುದಿಲ್ಲ. ಇಂಧನ, ಪಾಲಿಕೆ, ಜಲ, ನಗರಾಭಿವೃದ್ಧಿ, ಮಾಹಿತಿ ತಂತ್ರಜ್ಞಾನ, ಕೈಗಾರಿಕೆ ಕ್ಷೇತ್ರಗಳು ಸೇರಿದಂತೆ ಪ್ರಮುಖ ನಾಗರಿಕರ ಅಭಿಪ್ರಾಯ, ಸಲಹೆ ಪಡೆಯುತ್ತಾರೆ. 4 ತಿಂಗಳ ಕಾಲಾವಕಾಶ ನೀಡಿದ್ದು, ಈ ಅವಧಿಯಲ್ಲಿ ಐಎಸ್‌ಇಜಿ ನಕ್ಷೆ ರೂಪಿಸಲಿದ್ದಾರೆ. ಬೆಂಗಳೂರಿನ ನಾಗರಿಕರು, ಡೆವಲಪರ್‌ಗಳು, ಉದ್ದಿಮೆದಾರರು, ಶೈಕ್ಷಣಿಕ ಸಂಸ್ಥೆಗಳನ್ನು ವಿಶ್ವಾಸಕ್ಕೆ ಪಡೆದು ದೊಡ್ಡ ಮಾಸ್ಟರ್‌ಪ್ಲಾನ್ ಸೃಷ್ಟಿಸಬೇಕು ಎಂದು ಸೂಚಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಸಿಎಸ್ ಅಧ್ಯಕ್ಷತೆಯ ಚಾಲನಾ ಸಮಿತಿ
ಮುಂಬೈ, ವಿಷಾಖಪಟ್ಟಣ ಸೇರಿ ಕೆಲವು ನಗರಗಳಲ್ಲಿ ಮಹಾಯೋಜನೆ ರೂಪಿಸಿದ ಅನುಭವವನ್ನು ಐಎಸ್‌ಇಜಿ ಹೊಂದಿದ್ದು, ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಚಾಲನಾ ಸಮಿತಿ ರಚಿಸಲಾಗುತ್ತದೆ. ಎಲ್ಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಇದರ ಸದಸ್ಯರಾಗಿದ್ದು, ವರದಿ ತಯಾರಿಕೆಗೆ ಅಗತ್ಯ ಮಾಹಿತಿ ನೀಡಲಿದ್ದಾರೆ. ಪ್ರತಿ ವಾರ ಚಾಲನಾ ಸಮಿತಿ ಪರಿಶೀಲನೆ ನಡೆಸಲಿದೆ. 3 ತಿಂಗಳಲ್ಲಿ ಸಿಎಂ, ಡಿಸಿಎಂ ಅವರು ಪ್ರಗತಿ ಮೌಲ್ಯಮಾಪನ ಮಾಡಲಿದ್ದಾರೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net