ಡಿಜಿಟಲ್ ಖಾತಾ ನೀಡದ ಇ-ಸ್ವತ್ತು 2.0

 ಇ-ಸ್ವತ್ತು 2.0
ಇ-ಸ್ವತ್ತು 2.0
Published on
ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಡಿಜಿಟಲ್ ಖಾತಾ (ಇ-ಖಾತಾ) ನೀಡುವ ಇ-ಸ್ವತ್ತು 2.0 ತಂತ್ರಾಂಶದಲ್ಲಿ ಉಲ್ಬಣಗೊಂಡಿರುವ ತಾಂತ್ರಿಕ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಇದರ ಪರಿಣಾಮ ಇ-ಖಾತಾ ಯೋಜನೆ ಆಮೆವೇಗ ಪಡೆದುಕೊಂಡಿದ್ದು, ಗ್ರಾಮೀಣ ಜನರು ಪರದಾಡುವಂತಾಗಿದೆ.
ಗ್ರಾಮ ಪಂಚಾಯಿತಿಗಳ ಆದಾಯ ಹೆಚ್ಚಿಸಲು 1 ಕೋಟಿ ಆಸ್ತಿಗಳಿಗೆ ಇ-ಖಾತಾ ವಿತರಿಸಿ ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶದಿಂದ ಇ-ಸ್ವತ್ತು 2.0 ತಂತ್ರಾಂಶಕ್ಕೆ 2025ರ ಡಿಸೆಂಬರ್ 1ರಂದು ಚಾಲನೆ ನೀಡಲಾಯಿತು. ಆದರೆ, ನಾಲ್ಕೂ ತಿಂಗಳಲ್ಲಿ ಕೇವಲ 1.21 ಲಕ್ಷ ಇ-ಖಾತಾ ನೀಡಲಾಗಿದೆ. ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗಿಲ್ಲ. ಮೊದಲಿದ್ದ ಪಂಚತಂತ್ರ ಮತ್ತು ಇ-ಸ್ವತ್ತು 1.0 ಸ್‌ಟಾವೇರ್‌ಗೂ ಗ್ರಹಣ ಆವರಿಸಿದ್ದು, ಗ್ರಾಮ ಪಂಚಾಯಿತಿಯಲ್ಲಿ ಇ-ಖಾತಾ ವಿತರಣೆ ಸಂಪೂರ್ಣ ಸ್ಥಗಿತವಾಗಿದೆ.
ರಾಷ್ಟ್ರೀಯ ಮಾಹಿತಿ ಕೇಂದ್ರದ(ಎನ್‌ಐಸಿ)ಜತೆಗೆ ಸಮನ್ವಯತೆ ಇಲ್ಲದೆ ಕೆಲ ಮಾರ್ಪಾಡು ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಇ-ಸ್ವತ್ತು 2.0ಗೆ ಅಪ್‌ಗ್ರೇಡ್ ಮಾಡಿದ ಪರಿಣಾಮ ತಾಂತ್ರಿಕ ಸಮಸ್ಯೆಗಳು ಉಂಟಾಗಿದೆ ಎನ್ನಲಾಗಿದೆ.
ಹೊಸ ನಿಯಮದ ಪ್ರಕಾರ ಇ-ಸ್ವತ್ತು 2.0ರಲ್ಲಿ ಸಿಟಿಜನ್ ಲಾಗಿನ್ ಮೂಲಕ ಆಸ್ತಿ ಮಾಲೀಕರು ಅರ್ಜಿ ಸಲ್ಲಿಸಬಹುದು. ಆದರೆ, ಋಣಭಾರ ಪ್ರಮಾಣ ಪತ್ರ(ಇಸಿ) ಸಲ್ಲಿಸಿದಾಗ ಕಾವೇರಿ 2.0ಕ್ಕೆ ಲಿಂಕ್ ಆಗದ ಕಾರಣ ಅರ್ಜಿ ಸಲ್ಲಿಕೆ ಪೂರ್ಣವಾಗುತ್ತಿಲ್ಲ. ಸರಿಪಡಿಸುವ ಹೊತ್ತಿಗೆ ಇಸಿ ಆಯಸ್ಸು 15 ದಿನ ಮುಗಿದು ಹೋಗುತ್ತಿದ್ದು, ಹೊಸ ಇಸಿ ಕೇಳುತ್ತಿದೆ.
ನೂರಾರು ವರ್ಷಗಳಿಂದ ವಾಸವಾಗಿದ್ದರು ಗ್ರಾಮ ಠಾಣಾ ವ್ಯಾಪ್ತಿಯ ಆಸ್ತಿಗಳಿಗೆ ನೋಂದಾಯಿತ ಕ್ರಯಪತ್ರ ಕೇಳುತ್ತಿರುವುದು ದೊಡ್ಡ ಹಿನ್ನಡೆಯಾಗಿದೆ. ಮೊದಲು ಗ್ರಾಮಠಾಣಾ ಆಸ್ತಿಗಳಿಗೆ ಅರ್ಜಿ ಸಲ್ಲಿಸಿದಾಗ ಮೋಜಿನಿಗೆ ಹೋಗಿ ಅಲ್ಲಿಂದ ಸರ್ವೇಯರ್ ಬಂದು ಅಳತೆ ಮಾಡಿ ಕೊಡುತ್ತಿದ್ದರು. ಆನಂತರ ಸ್ಥಳ ಪರಿಶೀಲನೆ ನಡೆಸಿ ಪಂಚಾಯಿತಿಯಿಂದ ಇ-ಖಾತಾ ನೀಡಲಾಗುತ್ತಿತ್ತು. ಇದೀಗ ನೋಂದಾಯಿತ ಕ್ರಯಪತ್ರ ಕಡ್ಡಾಯ ಮಾಡಿರುವುದು ಅವೈಜ್ಞಾನಿಕವಾಗಿದೆ.
ಸಿಟಿಜಿನಲ್ ಲಾಗಿನ್‌ನಲ್ಲಿ ಅರ್ಜಿ ಸಲ್ಲಿಸಿದ ಮೇಲೆ ನಿಗದಿತ ಸಮಯದಲ್ಲಿ ಪಿಡಿಒ, ಕಾರ್ಯದರ್ಶಿ, ಆಡಳಿತಾಧಿಕಾರಿ, ಇಒ ಅಧಿಕಾರಿಗಳು ವಿಲೇವಾರಿ ಮಾಡದೆ ಇದ್ದರೇ ಸ್ವಯಂಚಾಲಿತವಾಗಿ(ಡೀಮ್ಡ್) ಇ-ಖಾತಾ ಸೃಜನೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ಈ ವ್ಯವಸ್ಥೆಯೂ ಜಾರಿಗೆ ಬಂದಿಲ್ಲ.
ಗ್ರಾಮ ಪಂಚಾಯಿತಿ ಮತ್ತು ನಗರ ಪ್ರದೇಶದ ಹೊಸ ಲೇಔಟ್‌ಗಳಲ್ಲಿ ಶೇ.60 ಸೈಟ್‌ಗಳಿಗೆ ಇ-ಖಾತಾ ಲಭಿಸಿ ಉಳಿದ ಶೇ.40 ಸೈಟ್‌ಗಳಿಗೆ ಏನು ಮಾಡಬೇಕೆಂಬ ಮಾರ್ಗಸೂಚಿ ಇಲ್ಲವಾಗಿದೆ. ಹೊಸದಾಗಿ ಅನುಮೋದನೆಗೊಂಡ ಆಸ್ತಿಗಳಿಗೆ ತಿದ್ದುಪಡಿ ಮಾಡುವ ಅವಕಾಶವನ್ನು ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಾರ್ಗಸೂಚಿ ದರವನ್ನು ಇ-ಸ್ವತ್ತು ತಂತ್ರಾಂಶದ ಜತೆಗೆ ಸಂಯೋಜನೆ ಆಗದ ಕಾರಣ ಹೊಸ ಅರ್ಜಿಗಳ ಸಲ್ಲಿಕೆಗೆ ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳೀಬಂದಿವೆ.

ಸಿಟಿಜನ್ ಲಾಗಿನ್‌ನಲ್ಲಿ ಆಗದ ಸೇವ್ :

ಇ-ಸ್ವತ್ತು ತಂತ್ರಾಂಶಕ್ಕೆ ಸಿಟಿಜನ್ ಲಾಗಿನ್‌ನಲ್ಲಿ ಅರ್ಜಿ ಸಲ್ಲಿಸಲು ಇಸಿ ಅಪ್‌ಲೋಡ್ ಸಮಸ್ಯೆ, ವಿದ್ಯುತ್ ಸರಬರಾಜು ಕಂಪನಿಗಳೊಂದಿಗೆ ಸಂಯೋಜನೆ ತೊಂದರೆ, ಗುಂಟೆ ಮತ್ತು ಸೆಂಟ್‌ನಲ್ಲಿ ವಿಸ್ತೀರ್ಣವನ್ನು ಚದರ ಮೀಟರ್‌ಗೆ ಪರಿವರ್ತಿಸಲು ಸಾಧ್ಯವಾಗದ ಪರಿಣಾಮ ಅರ್ಜಿಗಳು ಸೇವ್ ಆಗುತ್ತಿಲ್ಲ. ಹೊಸ ಬಡಾವಣೆಗಳಿಗೆ ಅರ್ಜಿಗಳನ್ನು ಸಲ್ಲಿಕೆಗೆ ಅವಕಾಶ ಇದ್ದರೂ ಕೇವಲ 678 ಲೇಔಟ್‌ಗಳ ಅರ್ಜಿ ಸಲ್ಲಿಕೆಯಾಗಿದ್ದು, 139 ಮಾತ್ರ ಅನುಮೋದನೆ ಲಭಿಸಿದೆ. ಅಪಾರ್ಟ್‌ಗಳಿಗೆ ಅರ್ಜಿ ಸಲ್ಲಿಕೆಗೂ ಇದೆ ತೊಡಕು ಉಂಟಾಗಿದೆ.

ಲಂಚಕ್ಕಾಗಿ ಭೌತಿಕ ದಾಖಲೆಗೆ ಬೇಡಿಕೆ :

ಇ-ಸ್ವತ್ತು 2.0 ತಂತ್ರಾಂಶದೊಂದಿಗೆ ಇತರ ಇಲಾಖೆ ದತ್ತಾಂಶ ಸಂಯೋಜನೆಗೊಂಡಿರುವ ಕಾರಣ ಸಿಟಿಜನ್ ಲಾಗಿನ್‌ನಿಂದ ಅರ್ಜಿಗಳು ಬಂದಾಗ ಅಧಿಕಾರಿಗಳು ನಿಗದಿತ ಸಮಯದಲ್ಲಿ ಪರಿಶೀಲಿಸಿ ವಿಲೇವಾರಿ ಮಾಡಬೇಕು. ಕೆಲ ಕಡೆಗಳಲ್ಲಿ ಲಂಚಕ್ಕಾಗಿ ಭೌತಿಕ ದಾಖಲೆ ತರುವಂತೆ ಅಧಿಕಾರಿಗಳು ಒತ್ತಾಯಿಸುವ ಆರೋಪ ಕೇಳಿಬಂದಿದೆ. ಅಧ್ಯಕ್ಷರು ಇಲ್ಲದ ಕಾರಣ 2-3 ಪಂಚಾಯಿತಿಗೆ ಆಡಳಿತಾಧಿಕಾರಿ ನೇಮಕಗೊಂಡಿದ್ದು, ಕಚೇರಿಗೆ ಬರುವುದೇ ಅಪರೂಪವಾಗಿದೆ.

ಕೇವಲ 41 ಸಾವಿರ ಬಿ ಖಾತಾ ವಿತರಣೆ :

ಅಕ್ರಮ ಬಡಾವಣೆಗಳ ಸೈಟ್‌ಗಳಿಗೆ ಬಿ ಖಾತಾ ನೀಡುವುದಾಗಿ ಹೇಳಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್‌ರಾಜ್ ಇಲಾಖೆ ಇಲ್ಲಿಯವರೆಗೂ ಇಡೀ ರಾಜ್ಯದಲ್ಲಿ ಕೇವಲ 41 ಸಾವಿರ ಬಿ ಖಾತಾ ವಿತರಣೆ ಮಾಡಿದೆ. ಬೆಂಗಳೂರು ನಗರದಲ್ಲಿ 35 ಸಾವಿರ ಖಾತಾ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5 ಸಾವಿರ ಬಿ ಖಾತಾ ವಿತರಣೆ ಹೊರತುಪಡಿಸಿದರೇ ಬಹುತೇಕ ಜಿಲ್ಲೆಗಳಲ್ಲಿ ಶೂನ್ಯ ಸಾಧನೆ ಮತ್ತು 1 ಅಂಕಿಯನ್ನು ದಾಟದೆ ಇರುವುದು ಇಲಾಖಾ ದಾಖಲೆಯಿಂದ ಕಂಡುಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net