ಕರ್ತವ್ಯ ಕ್ರಾಂತಿ, ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ

ವಿಧಾನಸೌಧ
ವಿಧಾನಸೌಧ
Published on
ಬೆಂಗಳೂರು: ರಾಜ್ಯ ಸರ್ಕಾರಿ ಅಧಿಕಾರಿ, ನೌಕರ ವರ್ಗದಲ್ಲಿ ಕೆಲವರು ಕರ್ತವ್ಯಕ್ಕೆ ಗೈರಾಗಿಕಳ್ಳಾಟ ನಡೆಸುತ್ತಿದ್ದವರಿಗೆ ಕರ್ತವ್ಯ (ಕೆಎಎಎಂಎಸ್, ಕರ್ನಾಟಕ ಸುಧಾರಿತ ಹಾಜರಾತಿ ನಿರ್ವಹಣಾ ವ್ಯವಸ್ಥೆ) ಎಐ ಆಧಾರಿತ ಆ್ಯಪ್ ಕಡಿವಾಣ ಹಾಕಿದೆ. ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆ ಹೆಚ್ಚಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ತವ್ಯ ಆ್ಯಪ್‌ನಲ್ಲಿ ಒಂದೇ ವಾರದಲ್ಲಿ ಶೇ.25 ನೋಂದಣಿಯಾಗಿದೆ. ಇದರಿಂದ ಹಾಜರಾತಿ ನಿರ್ವಹಣಾ ತಂತ್ರಜ್ಞಾನ ತಕ್ಕಮಟ್ಟಿಗೆ ಯಶಸ್ವಿಯಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಲಾಖಾ ಕಾರ್ಯದರ್ಶಿಗಳೊಂದಿಗೆ ನಡೆಸಿದ ಮೊದಲ ಸಭೆಯಲ್ಲಿ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ಕಚೇರಿ ವೇಳೆಯಲ್ಲಿ ಕಡ್ಡಾಯವಾಗಿ ಶೇ.100 ಹಾಜರಿರಬೇಕು ಮತ್ತು ಜನರ ಕುಂದುಕೊರತೆಗಳಿಗೆ ಸ್ಪಂದಿಸಬೇಕೆಂದು ಸೂಚನೆ ನೀಡಿದ್ದರು.
ಈ ಹಿಂದೆ ಜಾರಿಯಲ್ಲಿದ್ದ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಉದ್ಯೋಗಿಗಳು ಡಿಜಿಟಲ್ ಸಹಿ ಮಾಡಿ ಕಚೇರಿಯಿಂದ ಗೈರಾಗುವ ಸಾಧ್ಯತೆಗಳಿದ್ದವು. ಈ ದೋಷವನ್ನು ನಿವಾರಿಸಲು, ಉದ್ಯೋಗಿಗಳ ಭೌತಿಕ ಉಪಸ್ಥಿತಿ ಮತ್ತು ಕಚೇರಿಯ ಭೌಗೋಳಿಕ ಸ್ಥಳವನ್ನು ನಿಖರವಾಗಿ ಪತ್ತೆಹಚ್ಚುವ ಈ ಹೊಸ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಯಾವುದೇ ಖಾಸಗಿ ತಂತ್ರಜ್ಞಾನ ಸಂಸ್ಥೆಗಳ ನೆರವಿಲ್ಲದೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಉಸ್ತುವಾರಿಯಲ್ಲಿ, ಸೆಂಟರ್ ಫಾರ್ ಇ-ಗವರ್ನೆನ್ಸ್ ಮತ್ತು ಕರ್ನಾಟಕ ಎಐ ಸೆಲ್ ಜಂಟಿಯಾಗಿ ಕರ್ತವ್ಯ ಸಾಫ್ಟ್‌ವೇರ್ ಅನ್ನು ವಿನ್ಯಾಸಗೊಳಿಸಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ವೆಚ್ಚ ಉಳಿತಾಯವಾಗಿದೆ. ದತ್ತಾಂಶ ಸುರಕ್ಷತೆ ಮತ್ತು ಸ್ವಾಯತ್ತತೆ ಹೆಚ್ಚಾಗಿದೆ. ದೇಶದ ಇತರ ರಾಜ್ಯಗಳೂ ಮಾದರಿಯಾಗಿದೆ.
ಕಳೆದ ವಾರ 2.46 ಲಕ್ಷ ನೌಕರರು ನೋಂದಣಿ ಮಾಡಿಕೊಂಡಿದ್ದರು. ಪ್ರಸ್ತುತ 3.01 ಲಕ್ಷಕ್ಕೆ ಏರಿಕೆ ಆಗಿದೆ. ಕೇವಲ ಒಂದೇ ವಾರದಲ್ಲಿ ಶೇ.25 ಹೆಚ್ಚು ಸೇರ್ಪಡೆಗೊಂಡಿದ್ದಾರೆ. ಆ್ಯಪ್ ಮೂಲಕ ಪ್ರತಿದಿನ ದಾಖಲಾಗುವ ದೈನಂದಿನ ಹಾಜರಾತಿ ಸಂಖ್ಯೆಯು 1,85,308 ರಿಂದ 2,32,612ಕ್ಕೆ ಜಿಗಿದಿದ್ದು, ಸಕ್ರಿಯ ಬಳಕೆಯಲ್ಲಿ ಶೇ.25 ಭಾರಿ ಏರಿಕೆ ದಾಖಲಾಗಿದೆ. ಪ್ರಸ್ತುತ 42 ಇಲಾಖೆಗಳ 4,78,522 ನೌಕರರನ್ನು ಈ ವ್ಯವಸ್ಥೆಗೆ ಒಳಪಡಿಸಲಾಗಿದ್ದು, ಈ ಪೈಕಿ 3.01 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯಲ್ಲಿ 1,76,055 ಉದ್ಯೋಗಿಗಳಲ್ಲಿ ಈಗಾಗಲೇ 1,68,252 ನೌಕರರು ನೋಂದಾಯಿಸಿಕೊಂಡಿದ್ದು, 1,41,800ಕ್ಕೂ ಹೆಚ್ಚು ದೈನಂದಿನ ಚೆಕ್-ಇನ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 66,969 ನೋಂದಣಿ ಹಾಗೂ 54,400ಕ್ಕೂ ಹೆಚ್ಚು ದೈನಂದಿನ ಹಾಜರಾತಿಯೊಂದಿಗೆ 2ನೇ ಸ್ಥಾನದಲ್ಲಿದೆ. ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ ಈ ಎರಡು ಇಲಾಖೆಯಲ್ಲಿ ಯಶಸ್ವಿಯಾಗಿದೆ. ಇನ್ನುಳಿದ ಇತರ ಇಲಾಖೆಗಳು ಈಗಾಗಲೇ ಶೇ.90 ಹೆಚ್ಚು ನೋಂದಣಿ ಮೈಲಿಗಲ್ಲನ್ನು ದಾಟಿವೆ.

ತಂತ್ರಜ್ಞಾನದ ವೈಶಿಷ್ಟ್ಯಗಳು :

ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಮುಖ ಗುರುತಿಸುವಿಕೆ-ವಂಚನೆ ಹಾಜರಾತಿಯನ್ನು ತಡೆಯಲು ಲೈವ್‌ನೆಸ್ ಡಿಟೆಕ್ಷನ್ ತಂತ್ರಜ್ಞಾನದೊಂದಿಗೆ ಎಐ ಫೇಶಿಯಲ್ ರೆಕಗ್ನಿಷನ್ ಬಳಸಲಾಗಿದೆ. ಜಿಯೋ ಫೆನ್ಸಿಂಗ್-ಜಿಐಎಸ್ ತಂತ್ರಜ್ಞಾನದ ಮೂಲಕ ಉದ್ಯೋಗಿ ತನ್ನ ಕಚೇರಿಯ ನಿಗದಿತ ಪರಿಧಿಯೊಳಗೆ ಇದ್ದಾಗ ಮಾತ್ರ ಹಾಜರಾತಿ ದಾಖಲಿಸಲು ಸಾಧ್ಯವಾಗುತ್ತದೆ. ಡೇಟಾಬೇಸ್-ಇದನ್ನು ಆಧಾರ್ ಇ-ಕೆವೈಸಿ ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದೆ.
ಮೊಬೈಲ್ ಆ್ಯಪ್ ಮತ್ತು ರಜೆ ನಿರ್ವಹಣೆ- ಆಂಡ್ರಾಯ್ಡ್ ಮತ್ತು ಐಒಎಸ್ ಆಪ್‌ಗಳ ಮೂಲಕ ಹಾಜರಾತಿ, ರಜೆ ಮತ್ತು ಅಧಿಕೃತ ಹೊರಗಿನ ಕೆಲಸದ ವಿವರಗಳನ್ನು ದಾಖಲಿಸುವ ಸೌಲಭ್ಯವಿದೆ.

ಕರ್ತವ್ಯ ಆ್ಯಪ್‌ನಿಂದ ಸಿಗುವ ಉತ್ತಮ ಸೇವೆ:

-ಸಿಎಂ, ಸಿಎಸ್, ಜಿಲ್ಲಾ ಮಟ್ಟದಲ್ಲಿ ಡಿಸಿ/ಸಿಇಒಗಳಲ್ಲಿಗೆ ಡ್ಯಾಶ್‌ಬೋರ್ಡ್‌ನಲ್ಲಿ ಮಾಹಿತಿ
-ಕಚೇರಿಗಳಲ್ಲಿ ಸರ್ಕಾರಿ ಅಧಿಕಾರಿ, ನೌಕರರ ಹಾಜರಾಗಿ ಕಡ್ಡಾಯ ಇರಲಿದೆ
-ಸರ್ಕಾರಿ ನೌಕರರು ಜವಾಬ್ದಾರಿಯನ್ನು ಹೆಮ್ಮೆ, ಶಿಸ್ತುನಿಂದ ಮಾಡಲಿದ್ದಾರೆ
-ಅಧಿಕಾರಿಗಳ ಭೌತಿಕವಾಗಿ ಸಿಗುವುದಿಂದ ಜನರಲ್ಲಿ ವಿಶ್ವಾಸ ಹೆಚ್ಚಾಗಲಿದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net