ಕನಕಪುರ :ಬಿಡದಿ ಟೌನ್‌ಶಿಪ್ ಯೋಜನೆಗೆ ಕೃಷಿ ಭೂಮಿ ಉಳಿಸಿಕೊಳ್ಳುವ ರೈತರ ಮೇಲೆ ಸರ್ಕಾರ ದಾಖಲಿಸಿರುವ ಪ್ರಕರಣವನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿ ನಗರದ ಚನ್ನಬಸಪ್ಪ ವೃತ್ತದಲ್ಲಿ ರೈತ ಸಂಘದ ಕಾರ್ಯಕರ್ತರು, ಮುಖಂಡರು ಘೋಷಣೆ ಕೂಗಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಳ್ಳಹಳ್ಳಿ ಮಂಜುನಾಥ್ ಮಾತನಾಡಿ, ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಸುತ್ತಮುತ್ತ ರೈತರ ಭೂಮಿ ಬಲವಂತವಾಗಿ ಸ್ವಾಧಿಪಡಿಸಿಕೊಳ್ಳುತ್ತಿರುವುದನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ. ಆದರೂ ರೈತರ ಮನವಿ ತಿರಸ್ಕರಿಸಿ ಹಠಕ್ಕೆ ಬಿದ್ದ ಸರ್ಕಾರ ರೈತರ ಬದುಕನ್ನು ಮೂರಾಬಟ್ಟೆ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಜಿಲ್ಲಾಕಾರ್ಯದರ್ಶಿ ನಲ್ಲಹಳ್ಳಿ ಶ್ರೀನಿವಾಸ್ ಮಾತನಾಡಿ, ರಾಜ್ಯಾದ್ಯಂತ ರೈತರು ಭೂಸ್ವಾಧೀನ ಯೋಜನೆ ಕೈಬಿಡಲು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೂಸರ್ಕಾರ ಈ ಸ್ಥಳದಲ್ಲಿ ಜಂಟಿ ಅಳತೆ ಪ್ರಮಾಣಿಕರಣ ಮತ್ತು ಭೂಸಮೀಕ್ಷೆ ಮಾಡಲು ತೆರಳಿರುವುದು ರೈತರ ಆಕ್ರೋಶಕ್ಕೆ ಕಾರಣವಾಯಿತು. ರೈತರ ಮೇಲೆ ಹೂಡಿರುವ ಸುಳ್ಳು ಪ್ರಕರಣ ರದ್ದುಗೊಳಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ಪದಾಧಿಕಾರಿ ಶಿವರಾಜು, ಉಜ್ಜನಹಳ್ಳಿ ಮಲ್ಲಿಕಾರ್ಜುನ್, ಅಂತೋಣಿ, ವಿನೋದ್‌ರಾಜ್, ವೆಂಕಟೇಶ್, ಕೆಂಚೇಗೌಡ, ಪುಟ್ಟರಾಮು ಇತರರು ಇದ್ದರು.
16 ಕೆಕೆಪಿ 4
ಬಿಡದಿ ಭೂಸ್ವಾಧಿನ ವಿರೋಧಿಸಿ ಹಾಗೂ ರೈತರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣ ಕೂಡಲೇ ರದ್ದುಪಡಿಸಬೇಕೆಂದು ಒತ್ತಾಯಿಸಿ ಕನಕಪುರದಲ್ಲಿ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಮಂಜುನಾಥ್, ಶ್ರೀನಿವಾಸ್, ಶಿವರಾಜು, ಅಂತೋಣಿ, ಮಲ್ಲಿಕಾರ್ಜುನ್ ಇದ್ದರು.