ಸುರಪುರ: ತಾಲೂಕಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದಾಸ್ತಾನು ಇದ್ದು, ಕೊರತೆ ಇಲ್ಲ. ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ ಎಂದು ಡಿವೈಎಸ್ಪಿ ಜಾವೇದ್ ಇನಾಮದಾರ್ ಹೇಳಿದರು.
ನಗರದ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಜೆ ಕರೆದಿದ್ದ ಪೆಟ್ರೋಲ್ ಬಂಕ್ ಡೀಲರ್ಗಳ ಸಭೆಯಲ್ಲಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸ್ಟಾಕ್ ಇದ್ದು, ವದಂತಿಗಳಿಗೆ ಕಿವಿಗೊಡಬಾರದು. ಒಂದು ವಾರ ಆಗುವಷ್ಟು ಇಂಧನ ದಾಸ್ತಾನು ಇದೆ ಎಂದು ತಿಳಿಸಿದರು.
ಬಂಕ್ ಮಾಲೀಕರು ಯಾವ ಕಾರಣಕ್ಕೂ ಸ್ಟಾಕ್ ಮಾಡಿಡಬಾರದು. ಕಾಳಸಂತೆ ಅಥವಾ ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತಿಲ್ಲ. ಗ್ರಾಹಕರು ಕೂಡ ಬಾಟಲಿ ಮತ್ತು ಕ್ಯಾನ್ಗಳಲ್ಲಿ ಇಂಧನ ತುಂಬಿಸಿಕೊಳ್ಳುವಂತಿಲ್ಲ. ಅಗತ್ಯಕ್ಕೆ ತಕ್ಕಂತೆ ಪಡೆದು ಸಹಕರಿಸಬೇಕು ಎಂದು ಕೋರಿದರು.
ಸಾಮಾಜಿಕ ಜಾಲತಾಣಗಳಲ್ಲಿನ ವಿಷಯಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಇಂಧನ ಸರಳವಾಗಿ ಸರಬರಾಜು ಇದೆ. ಏನೇ ಸಮಸ್ಯೆ ಇದ್ದರೂ ಗ್ರಾಹಕರು ಮತ್ತು ಬಂಕ್ನವರು ಪೊಲೀಸ್ ಇಲಾಖೆಗೆ ತಿಳಿಸತಕ್ಕದ್ದು. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.