ಬಿಡದಿ ಟೌನ್‌ಶಿಪ್ ಬಗ್ಗೆ ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡುವೆ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
Published on
ಬೆಂಗಳೂರು: ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ವಿಧಾನಸಭೆ ಕಲಾಪದಲ್ಲಿ ಬಿಡದಿ ಟೌನ್‌ಶಿಪ್ ಬಗ್ಗೆ ನಾನು ಏನು ಹೇಳಿದ್ದೆ ಎಂಬುದನ್ನು ದಾಖಲೆಸಮೇತ ಶೀಘ್ರವೇ ಹೇಳುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ನಗರದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ಬಗ್ಗೆ ವಿಧಾನಸಭೆಯಲ್ಲಿ ಈ ಹಿಂದೆಯೇ ಚರ್ಚೆ ಆಗಿತ್ತು. ನನ್ನ ಕಾಲದಲ್ಲಿ ಐದು ಟೌನ್‌ಶಿಪ್ ಮಾಡುವ ವಿಚಾರದ ಬಗ್ಗೆ ವಿಸ್ತೃತ ಚರ್ಚೆ ನಡೆದಿತ್ತು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸತ್ಯಶೋದನಾ ಸಮಿತಿ ಬೇರೆ ರಚಿಸಿತ್ತು. ಆ ಬಗ್ಗೆ ನಾನು ಅಂದಿನ ಮುಖ್ಯಮಂತ್ರಿ ಆಗಿ ಏನು ಹೇಳಿದ್ದೇನೆ ಎಂಬುದು ದಾಖಲೆಯಲ್ಲಿದೆ. ರೈತರ ಫಲತ್ತಾದ ಜನೀನನ್ನು ಒಂದಿಂಚೂ ಸ್ವಾಧೀನ ಮಾಡುವುದಿಲ್ಲ ಎಂದಿದ್ದೆ.
ಭೂಮಾಲೀಕರಿಗೆ ಶಾಸಕ ಪರಿಹಾರದ ಚೆಕ್ ಕೊಟ್ಟ ಬಗ್ಗೆ ಲೇವಡಿ ಮಾಡಿದ ಕೇಂದ್ರ ಸಚಿವರು, ಭೂ ಸ್ವಾಧೀನ ಅಧಿಕಾರಿ ಎಂಬ ವ್ಯಕ್ತಿ ಇರುತ್ತಾನೆ. ಅಥವಾ ಆ ಜಿಲ್ಲೆಗೆ ಸಂಬಂಧಿಸಿದ ಅಧಿಕಾರಿಗಳು ಇರುತ್ತಾರೆ, ಅವರು ಪರಿಹಾರದ ಚೆಕ್ ಕೊಡಬೇಕಾಗುತ್ತದೆ. ಆದರೆ, ಶಾಸಕರು ಪರಿಹಾರದ ಚೆಕ್ ವಿತರಿಸುತ್ತಾರೆ ಎಂದರೇ ಏನರ್ಥ? ಕೆಲವರಿಗೆ 2.30 ಕೋಟಿ ರೂ. ಚೆಕ್ ಕೊಟ್ಟು ರೈತರಿಗೆ ಆಸೆ ಹುಟ್ಟಿಸಿದ್ದಾರೆ.
20 ವರ್ಷಕ್ಕೆ 2 ಕೋಟಿ ಹಣವನ್ನು ಬ್ಯಾಂಕ್‌ನಲ್ಲಿ ಎಫ್‌ಡಿ ಇಟ್ಟರೆ ಹೆಚ್ಚು ಎಂದರೆ 40 ಲಕ್ಷ ರೂ. ಬಡ್ಡಿ ಸಿಗಬಹುದು. ಆದರೆ ಜಮೀನನ್ನು ಹಾಗೆ ಇಟ್ಟುಕೊಂಡರೆ 20 ಕೋಟಿ ರೂ. ಬೆಲೆ ಬಾಳುತ್ತದೆ ಎಂದು ರೈತರಿಗೆ ಕಿವಿಮಾತು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net